Friday, April 24, 2009

Ramanna & Bachche Gowda (Part-4) ಇಮಾನ ಒಳ್ಡತಾವ್ ಮೋಯ್ನಿ ಅಡ್ಡಾಕ್ತಳಂತೆ?


ತನ್ನ ಭಾಮೈದನ ನೆಲೆಸೂರಾದ ನ್ಯುಜೀಲೆಂಡಿಗೆ ಪ್ರವಾಸ ಹೊರಟಿದ್ದ ರಾಮಣ್ಣ ಮತ್ತು ಅವನ ಬಲಗೈ ಬಂಟ ಬಚ್ಚಪ್ಪ ಬೆಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ತಪಾಸಣೆಯ ಸಾಲಿನಲ್ಲಿ ನಿಂತಿದ್ದರು.

ವಿಮಾನ ಹತ್ತುವುದಕ್ಕೆ ಮುಂಚೆಯೇ ಅವರಿಗೆ ಬೆಂಗಳೂರಿನಿಂದ ಈಗಾಗಲೇ ಬಹಳ ದೂರ ಹೊರಟುಹೋಗಿದ್ದಂತೆ ಭಾಸವಾಗಿಸುತ್ತಿತ್ತು ಅಲ್ಲಿಯ ವಾತಾವರಣ.
ಎಲ್ಲೆಡೆ ಲಾಲೂ ಯಾದವ್ ತಮ್ಮಂದಿರಂತಿದ್ದ ಪೇದೆಗಳು, ಐದು ಹೆಜ್ಜೆಗೊಮ್ಮೆ ಅವರಿವರ ಪಾಸ್‌ಪೋರ್ಟುಗಳನ್ನು ತೆರೆದು ನೋಡುವ ಚಟವಿದ್ದಂತಿದ್ದ ಕೋಟುಧಾರೀ ಚಿತ್ರಗುಪ್ತರು,

ಬಚ್ಚಪ್ಪ ಟಿಕೆಟ್ಟು ತೋರಿಸಿ "ಇದ್ಕೆಲ್ ನಿಂತ್ಗಬೇಕವ್ವ?" ಎಂದರೆ "ಗೋ ದಟ್ ಕ್ಯೂ" ಎಂದುತ್ತರಿಸುವ ಆಂಗ್ಲಮೋಹೀ ಸ್ಥಳೀಯರು.

ಲಾಗಾಯ್ತಿನಿಂದ ಪರಿಚಿತವಾಗಿದ್ದ ನಿದ್ರಾಲೋಲ ದೇವನಹಳ್ಳಿಯಲ್ಲಿ ಇದೊಂದು ಪರಕೀಯರ ದ್ವೀಪವಿದ್ದಂತೆ ತೋರುತ್ತಿತ್ತು. ತಪಾಸಣೆಗೆ ಬಚ್ಚಪ್ಪನ ಸರದಿ ಬಂದಾಗ ಖಾಲಿಯಾಗಿದ್ದ ಹೆಂಗಸರ ಸಾಲಿಗೆ ಕಳುಹಿಸಿದರು.

ಅಲ್ಲಿದ್ದ ಸದ್ರುಢ ಹೆಣ್ಣು ಪೇದೆ ಅವನ ಎರಡೂ ಕೈಗಳನ್ನು ಸೂರ್ಯನಮಸ್ಕಾರಕ್ಕೆಂಬಂತೆ ಮೇಲ್ಮಾಡಿಸಿ ಬರಸೆಳೆದು ಮೈದಡವುತ್ತ ಕೈಲಿದ್ದ ಮೆಟಲ್ ಡಿಟೆಕ್ಟರನ್ನು ಆತ್ಮೀಯತೆಯಿಂದ ಎಲ್ಲೆಡೆ ಓಡಾಡಿಸಿ ಬಿಡುಗಡೆಯಿತ್ತಳು.
ಎಕ್ಸ್‌ರೇ ಮೆಷೀನಿನಿಂದ ಹೊರಬರುತ್ತಿದ್ದ ಬಚ್ಚಪ್ಪನ ಕೈಚೀಲವನ್ನು ಅಲ್ಲೇ ಪಕ್ಕದಲ್ಲಿ ನಿಂತುಕೊಂಡು ಮೂಗಿನೊಳಗೆ ಬೆರಳಾಡಿಸುತ್ತಿದ್ದ ಲಾಲೂ ತಮ್ಮಾಜಿಯೊಬ್ಬ ತಡೆಹಿಡಿದು,

"ಮಸೀಣಮೇ ಇಸಕೆ ಬಿತ್ತರ್ ಬೋತಲ್ ದಿಕೆ. ಖೊಲೀಕ್ ಪಡಿ" ಎಂದ,
ಬೆರಳನ್ನು ಹೊರತೆಗೆದು ಫಲಿತಾಂಶವನ್ನು ಪರೀಕ್ಷಿಸುತ್ತ.

ಫಲಿತಾಂಶದ ವೀಕ್ಷಣೆಯಲ್ಲಿ ತನ್ಮಯನಾಗಿ ಪಾಲ್ಗೊಳ್ಳತೊಡಗಿದ್ದ ಬಚ್ಚಪ್ಪ ಎಚ್ಚೆತ್ತು "ಯೇನ್ಸೋಮಿ?" ಎಂದ.

ದೂರದರ್ಶನದ ಕೃಪೆಯಿಂದ ಹಿಂದಿಯಲ್ಲಿ ಅಲ್ಪಸ್ವಲ್ಪ ಪಳಗಿದ್ದ ರಾಮಣ್ಣ "ಆ ಮಸೀನ್ಗೆ ನಿನ್ ಬ್ಯಾಗೊಳ್ಗೇನೊ ಬಾಟ್ಲು ಕಾಣ್ತದಂತೆ ಕಣ್ಲೆ, ಅದೇನೈತೋ ತಗುದ್ ತೋರ್ಸತ್ಲಗೆ" ಎನ್ನುತ್ತ ತಾನೇ ಮುಂದಾಗಿ ಬ್ಯಾಗು ತೆರೆದಿಟ್ಟ.

ಲಾಲೂ ಸಿಂಗ್ ತನ್ನ ಇದೀಗ ಪವಿತ್ರಗೊಳಿಸಿದ ಕೈಯನ್ನು ಬ್ಯಾಗಿನೊಳಗೆಲ್ಲ ಆಡಿಸಿ ಅರ್ಧತುಂಬಿದ ಹಳೇ ಟ್ರಿಪಲೆಕ್ಸ್ ರಮ್ ಬಾಟಲೊಂದನ್ನು ಈಚೆಗೆಳೆಯುತ್ತ "ಇಸಮೇ ಕಾ ಹೆ?" ಎಂದು ಬಚ್ಚಪ್ಪನ ಕಡೆ ದರ್ಪದ ಹುಬ್ಬಾಡಿಸಿದ.

"ಅಳ್ಳೆಣ್ಣೆ" ಎಂದ ಬಚ್ಚಪ್ಪ, ಅವನ ದರ್ಪಕ್ಕೆ ಮಣಿಯದೆ.

ಸುದೀರ್ಘ ಚರ್ಚೆಯ ನಂತರ ಕೈಚೀಲದಲ್ಲಿ ಒಂದೆರಡು ಚಮಚೆಗಿಂತ ಹೆಚ್ಚಾಗಿ ಯಾವ ದ್ರವ್ಯಗಳನ್ನೂ ಕೊಂಡೊಯ್ಯುವಂತಿಲ್ಲವೆಂಬುದು ಮನದಟ್ಟಾಗಿ ಬಾಟಲನ್ನು ಅಲ್ಲೇ ಕಸದ ಬುಟ್ಟಿಗೆ ಎಸೆದ ಬಚ್ಚಪ್ಪ ರೋಸಿ "ಒಟ್ಟ್‌ತುಂಬ ನೀರ್ ಕುಡ್ದಿವ್ನಿ, ಅದ್ನು ಬುಡ್ತನಾ ಇಲ್ಲಾ ಇಲ್ಲೇ ಉಯ್ದೋಬೆಕ ಕೇಳವುನ್ನ" ಎಂದು ಭುಸುಗುಡುತ್ತ ಮುಂದೆ ನಡೆದ.

ಇಬ್ಬರೂ ಪ್ರಯಾಣಿಕರ ನಿರೀಕ್ಷಣಾ ಕೊಠಡಿಯೊಳಕ್ಕೆ ಕಾಲಿಟ್ಟು ಸುತ್ತ ಕಣ್ಣುಹಾಯಿಸಿದರು.

ಅಲ್ಲಲ್ಲಿ ಇವರಂತೆ ಮೊದಲಬಾರಿಗೆ ವಿಮಾನ ಹತ್ತಲಿದ್ದವರು ತಮ್ಮ ಬ್ಯಾಗು ಟಿಕೆಟ್ಟುಗಳನ್ನು ಮತ್ತೆ ಮತ್ತೆ ಭದ್ರಪಡಿಸಿಕೊಳ್ಳುತ್ತ ಪೇಟೆಯಲ್ಲಿ ಸಿನಿಮಾ ನೋಡಲು ಹೊರಟಿರುವ ಹಳ್ಳಿ ಹುಡುಗರಂತೆ ಉತ್ಸುಕರಾಗಿ ಅಕ್ಕಪಕ್ಕದವರನ್ನು ನೋಡುತ್ತ ಕುಳಿತಿದ್ದರು.

ಅವರ ಅನನುಭವೀ ಚರ್ಯೆಗಳನ್ನು ಇದೀಗ ಎರಡನೇ ಬಾರಿ ವಿಮಾನ ಪ್ರಯಾಣ ಮಾಡಲಿದ್ದವರು ತಾತ್ಸಾರದ ಹುಬ್ಬುಗಂಟಿಕ್ಕಿ ಗಮನಿಸುತ್ತಿದ್ದರು, ನೂರಾರು ಬಾರಿ ದೇಶಾಟನೆ ಮಾಡಿ ನುರಿತವರಂತೆ ನಟಿಸುತ್ತ.

ನಿಜವಾಗಿಯೂ ನೂರಾರು ಬಾರಿ ಪ್ರಯಾಣ ಮಾಡಿದ್ದವರು ಯಾರೂ ಇಲ್ಲದ ಮೂಲೆಗಳನ್ನು ಹುಡುಕಿ ಪೇಪರು ಪುಸ್ತಕಗಳಲ್ಲಿ ಮಗ್ನರಾಗಿದ್ದರು.

"ಆವಮ್ಮ ಯಾಕ್ ನನ್ನ್ ಅಂಗ್ ಮೈದಡ್ವಿ ನೋಡಿದ್ದು?" ಬಚ್ಚಪ್ಪ ಖಾಲಿಯಿದ್ದ ಕೆಲವು ಸಾಲುಕುರ್ಚಿಗಳ ಕಡೆ ಹೆಜ್ಜೆಯಿಡುತ್ತ ಕೇಳಿದ.

"ಈಟಗ್ಲ ಕೋಟು ಪ್ಯಾಂಟಾಕಿರವ್ನು ಎಲ್ಲೋ ದಾರಾಸಿಂಗ್ ತಮ್ಮ್‌ನೇ ಇರ್ಬೇಕು ಅಂತ ಮುಟ್ ನೋಡವ್ಳೇಳೊ" ಎಂದ ರಾಮಣ್ಣ,
ಮತ್ತೆ ಬಚ್ಚಪ್ಪನ ಸಡಿಲ ಬಟ್ಟೆಗಳ ಗೇಲಿಗಿಳಿಯುತ್ತ.

"ಅದಲ್ಲಪೋ, ಅದೆಂತದೋ ಮೀಟ್ರ ಮೈಮ್ಯಾಗೆಲ್ಲ ಓಡಾಡ್ಸುದ್ಲಲ್ಲ....ಅದೇ, ನನ್ನ್ ತಾಯ್ತುದ್ ತಾವ್ ಕೀ ಕೀ ಅಂತ್ ಬಡ್ಕಣ್ತಲ್ಲ, ಅದೇನ್ಕೇಂತ?"

"ಒಟ್ಟೆ ತಾವ್ ಚಾಕೂ ಚೂರೀ ಬಾಂಬು ಬಟ್ರೆ ಏನಾರ ಅವ್ತಿಟ್ಗಂಡೀಯೆನೋ ಅಂತ್ ನೋಡಕ್ ಕಣ್ಲೆ"

"ಓ?......ಬಾಂಬ ಮಡೀಕಂಡೇ ಬಂದಿರೋರ್ನ ಈಪಾಟಿ ತಬ್ಗ್ಯಂಡ್ ಮುದ್ದಾಡುದ್ರೆ ಅದು ಡಮ್ ಅನ್ಬುಡಕುಲ್ವೆ?"

"ಅನ್ನ್‌ದೆ ಮತ್ತಿಗ!" ಎಂದ ರಾಮಣ್ಣ, ನಗು ಹತ್ತಿಕ್ಕಿ.

"ಅದ್ಕೆ ಆ ಮೀಟ್ರು ಓಡ್ಸೋ ಕೆಲ್ಸುಕ್ಕೆ ದಿನಾ ಲಾಟ್ರಿ ತಗಿತರಂತೆ ಕಣ. ಯಾರೆಸ್ರು ಬತ್ತದೋ ಅವ್ರೆಸ್ರಲ್ ಮಿಕ್ಕೋರು ದ್ಯಾವುರ್ಗ್ ಅರ್ಚ್ನೆ ಮಾಡುಸ್ತರಂತೆ"

".....ಸಾಬ್ರೆಸ್ರು ಬಂದ್ರೆ?"

"ಥೂ ಆಳಾಗೋಗ್ಲಿ ಬುಡ್ಲ.." ಎಂದ ರಾಮಣ್ಣ, ಯಾರಿಗೂ ಹೊಳೆಯದ ಪ್ರಶ್ನೆಗಳನ್ನು ಕೇಳುವ ಬಚ್ಚಪ್ಪನ ಅಪೂರ್ವ ಕಲೆಗೆ ಮತ್ತೊಮ್ಮೆ ಸೋಲುತ್ತ.

ಬಚ್ಚಪ್ಪ ಕೈಚೀಲವನ್ನು ಸಾಲುಕುರ್ಚಿಯೊಂದಕ್ಕೊರಗಿಸಿ ಕಿಟಕಿಯಾಚೆ ನೋಡಿದ.

ಮುಸ್ಸಂಜೆಯ ಮಬ್ಬು ಕತ್ತಲೆಯಲ್ಲಿ ತಮ್ಮ ಬೆಳ್ಗೊಳಕ್ಕೆ ಮರಳುತ್ತಿರುವ ಹಂಸಗಳಂತೆ ವಿಮಾನಗಳು ಬಿಂಕದಿಂದ ಬಂದಿಳಿಯುವುದೂ, ಸ್ವಲ್ಪ ಹೊತ್ತಿಗೆ ಏನೋ ಮರೆತಂತೆ ಮತ್ತೆ ಅದೇ ಪ್ರಯಾಸವಿಲ್ಲದ ಬೆಡಗಿನಿಂದ ರೆಕ್ಕೆ ಮಿಡಿಯದೆ ಹಾರಿಹೋಗುವುದನ್ನು ಎವೆಯಿಕ್ಕದೆ ನೋಡುತ್ತಾ,

"ಈ ಇಮಾನ್ಗೋಳು ರೆಕ್ಕೆ ಬಡಿದಲೆನೆ ಅದೆಂಗ್ ಮ್ಯಾಕ್ಕೊಯ್ತವಪ್ಪ" ಎಂದ.

"ಇವಗ್ ಅನ್ಮಂತ ರೆಕ್ಕೆ ಬಡಿದಲೆ ಲಂಕೆಗ್ ಆರ್ಕಂಡ್ ಓಗ್ಬರ್ಲಿಲ್ವ? ಅಂಗೇ..." ತಾಂತ್ರಿಕ ಉತ್ತರ ಕೊಡಲಾಗದೆ ಉಪಮಾನದ ಉಪೇಕ್ಷೆಗೆ ಮೊರೆಹೋದ ರಾಮಣ್ಣ.

"ಕೈ ಅಗಲ್ವಾಗಿಕ್ಕಂಡ್ ಪಾಷ್ಟಾಗ್ ಓಡುದ್ರೆ ನೀನೂ ಮ್ಯಾಕ್ ಓಬೋದೇಳ" "ಅದ್ಸರೀನ್ನು...ಕೈ ಅಗುಲ್ವಾಗಿಟ್ಗಣದೇನ್ ಬ್ಯಾಡ...ಆ ಅಲ್ಸೂರಗ್ ರೋಡ್ ದಾಟದ್ ವಸಿ ತಡ್ವಾದ್ರಾಯ್ತು, ಬಸ್ಸು ಲಾರಿಗುಳೇ ಚಕ್ ಅಂತ ಮ್ಯಾಕ್ ಕಳುಸ್‌ಬುಡ್ತವೆ....ಆರಾಡ್ಕಂಡಿರ್ಲೀಂತ" ಎಂದ ಬಚ್ಚಪ್ಪ.

ಮೇಲಕ್ಕೆ ಹೋಗುವ ಮಾತು ಬಂದೊಡನೆ ಅವನ ತಲೆಯಲ್ಲಿ ಕೊರೆಯುತ್ತಿದ್ದ ಇನ್ನೊಂದು ವಿಷಯ ಪ್ರಸ್ತಾಪಿಸಿದ.

"ಔದೂ, ಈ ಇಮಾನ ಮ್ಯಾಕ್ಕೋಗೋ ತಾವ ಯಾವ್ದೋ ಬೀಳೀ ಸೀರೆ ಉಟ್ಗಂಡಿರೋ ಮೋಯ್ನಿ ಅಡ್ಡ್ ಬತ್ತಳಂತ್ ಔದೇನಪೊ?"

"ಊಂ ಕಣ್ಲೆ......ಕತ್ತ್ಲಾದ್ಮೇಲ್ ಒಲ್ಡೋ ಇಮಾನ್ಗುಳ್ನ್ ಅಡ್ಡಾಕ್ತದಂತೆ...." ರಾಮಣ್ಣ ಮುಖ ಬಿಗಿ ಹಿಡಿದು ಬಚ್ಚಪ್ಪನ ಕಡೆ ನೋಡಿದ.

"ಇನ್ನೇನ್ ಕತ್ಲಾಯ್ತಾದಲಪ..." ಎಂದ ಬಚ್ಚಪ್ಪ ತವಕದಿಂದ, ರಾಮಣ್ಣನ ಕಣ್ಣಲ್ಲಿ ಕೀಟಲೆಯ ಕುರುಹು ಹುಡುಕುತ್ತ.

"ಇಲ್ಲೇಳ, ಅದ್ ಅಮಾಸೆ ದಿನ ಮಾತ್ರನಂತೆ ಬರದು.."

ರಾಮಣ್ಣ ಇಲ್ಲದ ಆಕಳಿಕೆ ಬರಿಸಿಕೊಂಡು ಅಂಗೈಯಲ್ಲೇನೋ ಹುಡುಕತೊಡಗಿದ.

"ಅಯ್, ಇವತ್ತೇ ಅಲ್ವ ಅಮಾಸೆ !" ಬಚ್ಚಪ್ಪನ ತವಕ ನಸುಗಾಬರಿಗೆ ತಿರುಗಿತು.

"ಥೂ ಅದ್ಯಾಕಂಗಾಡೀ ಬುಡ್ಲ, ಅದ್ ಬರೀ ಸಡ್ಲ ಪ್ಯಾಂಟ್ ಆಕಿರೋರ್ಗೇನಂತೆ ಕಾಣದು..." ಎನ್ನುತ್ತ ರಾಮಣ್ಣ ಬಚ್ಚಪ್ಪನ ಪೇಚಿಗೆ ಮೈಯೆಲ್ಲ ಕುಲುಕಿಸಿ ನಕ್ಕ.

"ಯಾಕ್ ಮೋಯ್ನಿ ಸಂದಾಗಿದ್ರೆ ಒಳುಕ್ ಕರ್ದು ಪಕ್ದಾಗ್ ಕೂರ್ಸ್ಕಂಡೀಯಾ?"

"ಯೇ, ಅವು ಕರ್‍ಯೋಗಂಟ ಇದ್ದಾವಾ? ಗಾಳೀಗ್ ಬಂದು ಅಂಗೆ ಮೈಯಗ್ ಸೇರ್ಕಬುಡಲ್ವೆ..!" ಎಂದ ಬಚ್ಚಪ್ಪ, ಸ್ವಲ್ಪ ನಿರಾಳದ ಉಸಿರೆಳೆಯುತ್ತ.

"ಒಹೊಹೊ....ರಮ್ಮೊಳಿಕ್ ಕೋಲ ಸೇರ್ಕಬುಟ್ಟಂಗೆ ನನ್ಮಗುಂದು ! ಬಾಕ್ಲು ಸೊಂದಗ್ ಅವ್ ಬರ್ಬೌದು, ಆದ್ರೆ ಸೀರೆ ಸಿಗಾಕ್ಕಬುಡ್ತದಲಪ!

ಅಂದಂಗೇ....ಈ ನಿಮ್ಮ್ ಮೋಯ್ನಿಗುಳೆಲ್ಲ ಯಾಕ್ ಯಾವಾಗೂ ಬಿಳೀ ಸೀರೇನೇ ಉಟ್ಗಂಡ್ ಓಡಾಡ್ತವ್ಲ?"

"ಕತ್ಲಾಗ್ ಕಾಣ್ಬ್ಯಾಡ್ವೆ?"

"ಓ...ಅಂಗೆ.!.....ಗೆಜ್ಜೆ ಆಕ್ಕಮದೂ?

ಕುಳ್ಡ್ರು ಅಡ್ಬಂದ್ರೆ ಕೇಳ್ಲೀ ಅಂತನೆನೋ? ಯಾಕ್ ಒಂದ್ ಸೈಕಲ್ ಬೆಲ್ಲು ಮಡಿಕಬುಡ್ಲೇಳು....ಟ್ರಿನ್ ಟ್ರೀನ್....ಮೋಯ್ನಿ ಬಂತು ಮೋಯ್ನೀ...ದಾರಿಬುಡೀ, ಅಂತ..........ಪೆಕರ್ ನನ್ಮಗುನ್ ತಂದು" ರಾಮಣ್ಣ ಅಸಹನೆಯಿಂದ ಮೂದಲಿಸಿದ.

"ನಿಮ್ಮಂತೋರಿಂದ್ಲೆ ಕಣ್ಲ ನಮ್ ದೇಸ್ದಗ್ ಗಲ್ಲಿಗೊಬ್ಬ ಗಿಣಿಸಾಸ್ತ್ರ ಯೇಳವ್ನು ಬೀದಿಗೊಬ್ಬ ಬುಡ್ಬುಡ್ಕೆ ಬಾಬ ಉಟ್ಗಂಡಿರದು.....ಮೋಯ್ನಿಯಂತೆ ಮೋಯ್ನಿ.....ಯಾವ್ತಾರ ಕಂಡೀಯೇನ್ಲ ಕಣ್ಣಗೆ? ಯಾವನೋ ಪಂಗ್ನಾಮ ಆಕೋ ಸಿಂಗ್ಳೀಕ ಯೋಳ್ತನೆ ನೀನ್ ಪೆಂಗ್ನಂಗ್ ಕ್ಯೋಳುಸ್ಕಂಬ..! "

"ಇವಗ್ ನೀನ್ ದ್ಯಾವುಸ್ತಾನುಕ್ ಓಗಲ್ವೇ....ನೀನೇನ್ ದ್ಯಾವುರ್ನ್ ಕಣ್ಣಾರೆ ಕಂಡೀಯಾ?...ಅಂಗೇಯ ಇದೂವೆ...ಅವ್ರವ್ರ್ ನಂಬ್ಕೆ" ಎಂದ ಬಚ್ಚಪ್ಪ ಸೋಲದೆ.

"ಲೈ, ನಾನ್ ದ್ಯಾವುಸ್ತಾನುಕ್ ಓಗದೂ ಅಬ್ಬ ಅರಿದಿನಾಂತ್ ಮಾಡದೂ ನಮ್ಮ್ ಇರೇಕುರ್ ಸಂಪುರ್ದಾಯ್ಗುಳ್ನ ಮುಂದ್ವರ್ಸ್ಕಂಡ್ ಓಗಕ್ಕೆ - ದ್ಯಾವುರ್ ಮೆಚ್ಲೀಂತ ದಕ್ಸ್ಣೆ ಆಕಕ್ಕೂ ಅಲ್ಲ ದೆವ್ವ್‌ಗುಳ್ ಬುಡ್ಸೂಂತ್ ಕೋಳಿ ಕೂಸಕ್ಕೂ ಅಲ್ಲ. ದ್ಯಾವುರ್ ಮೇಲ್ ಬಾರ ಆಕ್ದೋರ್ಗ್ ಯಾವ್ತಾರ ನೆಮ್ದಿ ಸಿಗ್ಬೋದೆನೊ, ಮಂತುರ್ವಾದಿ ಮೇಲ್ ಬಾರ ಆಕ್ದೋರ್ಗ್ ಯಾವತ್ತೂ ನೆಮ್ದಿ ಇಲ್ಲ, ತಿಳ್ಕ....ಸುಮ್ಕ್ ಎಂಗಂದ್ರಂಗ್-"
ಎನ್ನುವಷ್ಟರಲ್ಲಿ ಆಕಾಶವಾಣಿಯಲ್ಲಿ ಪ್ರಯಾಣಿಕರು ವಿಮಾನದೊಳಗೆ ಹೋಗಲು ಅನುವಾಗಿ ಎಂಬ ಸೂಚನೆ ಬಂತು.

ವಿಮಾನದಲ್ಲಿ ಸೀಟು ಸಿಗುವುದೋ ಇಲ್ಲವೋ ಎಂಬಂತೆ ಎಲ್ಲರೂ ಸರಸರನೆ ಸುರಂಗದ ಬಾಗಿಲ ಬಳಿ ಸಾಲಾಗಿ ನಿಂತರು. ಇವರೂ ಮಿಕ್ಕವರನ್ನು ಹಿಂಬಾಲಿಸಿ ವಿಮಾನದ ಬಾಗಿಲಿಗೆ ಬಂದರು.

ಬಚ್ಚಪ್ಪ ಒಳಗೆ ಹೆಜ್ಜೆ ಇಡುತ್ತಿದ್ದ ಹಾಗೇ ಬಾಗಿಲಲ್ಲಿದ್ದ ಲಲನಾಮಣಿ ಕೈಜೋಡಿಸಿ "ನಮಶ್ಕಾರ್ !" ಎಂದಳು. ನಮಸ್ಕಾರ ಎಲ್ಲರಿಗೂ ಮಾಡುತಿದ್ದಳೆಂಬುದನ್ನು ಗಮನಿಸದ ಬಚ್ಚಪ್ಪ ವಿಸ್ಮಯಗೊಂಡು

"ಯಾರೋ ಗುರ್ತ್‌ಸಿಗುಲ್ವೇ..."
ಎಂದು ರಾಗವೆಳೆಯುತ್ತಿದ್ದಹಾಗೆ ರಾಮಣ್ಣ ಅವನನ್ನು ಅವಸರವಾಗಿ ಸೀಟುಗಳ ಕಡೆಗೆ ತಳ್ಳಿಕೊಂಡು ಒಳನಡೆದ.

ಒಳಗಿದ್ದೊಬ್ಬ ಪರಿಚಾರಕ ಇವರ ಕೈಲಿದ್ದ ಚೀಟಿ ನೋಡಿ ಸೀಟಿಗೆ ತೋರಿಸಿ ಬೆಲ್ಟು ಹಾಕಿಸಿದ.

ವಿಮಾನ ಹೊರಟಾಗ ಮುಂದಿನ ಸೀಟನ್ನು ಭದ್ರವಾಗಿ ತಬ್ಬಿ ಹಿಡಿದಿದ್ದ ಬಚ್ಚಪ್ಪ ಅದು ಮೇಲಕ್ಕೆ ಹಾರಿ ಅದುರುವುದು ನಿಂತ ಮೇಲೆ ನೆಮ್ಮದಿಯಾಗಿ ಹಿಂದಕ್ಕೊರಗಿ ಕುಳಿತ.

ಸ್ವಲ್ಪ ಹೊತ್ತಿಗೆ ಏರ್ ಹೋಸ್ಟೆಸ್ ಒಬ್ಬಳು ಕೈಲಿದ್ದ ಚೀಟಿ ಓದುತ್ತ ಸೀಟು ನಂಬರುಗಳನ್ನು ಗಮನಿಸುತ್ತ ಇವರ ಕಡೆಗೆ ಬಂದಳು.

"ಅಗಳೋ, ಯಾವ್ದೋ ಮೋಯ್ನಿ ಏನೋ ಪೇಪರಿಡ್ಕಂಡ್ ನಿನ್ ಕಡೀಕೆ ಬತ್ತಾವ್ಳೆ.." ಎಂದ ರಾಮಣ್ಣ.

ಬಳಿಗೆ ಬಂದ ಅವಳು ಪ್ರಶ್ನಾರ್ಥಕವಾಗಿ "ಸರ್, ಹ್ಯಾವ್ ಯೂ ಬುಕ್ಡ್ ಎ ಸ್ಪೆಶಲ್ ವೆಜಿಟೇರಿಯನ್ ಮೀಲ್?" ಎಂದಳು. ಇಬ್ಬರೂ ಒಬ್ಬರನ್ನೊಬ್ಬರು ನೋಡಿಕೊಂಡರು.

ರಾಮಣ್ಣ ಪ್ರಯಾಣಕ್ಕಾಗಿ ಕಲಿತ ಪದಗಳಲ್ಲಾಗಲೀ ಬರೆಸಿಕೊಂಡು ಬಂದಿದ್ದ ಚೀಟಿಗಳಲ್ಲಾಗಲೀ ಈ ಸದ್ದುಗಳು ಇರಲಿಲ್ಲ.

ಪಕ್ಕದಲ್ಲಿದ್ದವನನ್ನು "ಏನಂತ್ ಸೋಮಿ ಈವಮ್ಮ ಕ್ಯೋಳ್ತಿರದು?" ಎಂದು ಕೇಳಿದ.

"ನೀವು ಸ್ಪೆಶಲ್ ಊಟಕ್ ಏನಾದ್ರೂ ಹೇಳಿದ್ರಾ ಅಂತ ಕೇಳ್ತಿದರೆ" ಎಂದು ಆತ ವಿವರಿಸಿದ.

ಬಚ್ಚಪ್ಪ ಥಟ್ಟನೆ "ಪೆಸಲ್ ಏನಿಲ್ರ, ಮುದ್ದೇ ಉಪ್ಪೆಸ್ರಾದ್ರಾಯ್ತೂಂತ್ ಯೋಳ್ಬುಡ್ರಣ" ಎಂದ.

ರಾಮಣ್ಣ ಬಚ್ಚಪ್ಪನನ್ನು ಕಣ್ಣಲ್ಲೇ ಸುಡುವಂತೆ ದುರುಗುಟ್ಟುತ್ತಾ

"ಲೈ, ಇದೇನ್ ನಿಮ್ಮ್ ಗುಳುವ್ನಳ್ಳಿ ಮಿಲ್ಟ್ರಿ ಓಟ್ಲು ಅನ್ಕಂಡೀಯ? ಅಮಿಕ್ಕಂಡ್ ಕುಂತ್ಗಬೆಕು ಅಂತೇಳಿರ್ಲಿಲ್ಲ?" ಎಂದು ಉಗ್ರವಾಗಿ ಪಿಸುಗುಟ್ಟಿ ಪಕ್ಕದವನಿಗೆ,

"ನಮ್ ತಿಗೀಟ್ ಮಾಡ್ದೋರ್ ಯೋಳಿರ್ಬೊದೆನೊ.. ಯಾವ್ದಾದ್ರಾಯ್ತು ಅಂತೇಳಿ ಸೋಮಿ" ಎಂದು ವಿನಮ್ರವಾಗಿ ವಿನಂತಿಸಿದ.

"ಸುಮ್ನೆ ಹೂಂ ಅನ್ನಿ, ಯಾವ್ದಾದ್ರೂ ಆಯ್ತು ಅಂದ್ರೆ ದನದ್ ಗಿನದ್ ಹಾಕ್ಕೊಟ್ಬುಟ್ಟಾರು" ಎನ್ನುತ್ತ ಪಕ್ಕದವನು ಇವರ ಪರವಾಗಿ ತಲೆಯಾಡಿಸಿದ.

ಅವಳು ಅತ್ತ ಹೋಗುತ್ತಿದ್ದಂತೆ ಪಾನೀಯಗಳ ಗಾಡಿ ಬಂದು ನಿಂತಿತು.

ಪಕ್ಕದವನು ವಿಸ್ಕಿ ಹಾಕಿಸಿಕೊಂಡಿದ್ದನ್ನು ನೋಡಿದ ಬಚ್ಚಪ್ಪ ಉತ್ಸಾಹದಿಂದ "ತ್ರಿಬ್ಲೆಕ್ಸು ಐತೇನ್ ಕ್ಯೋಳವ?" ಎಂದ.

"ಯಾಕ್ ಕಳ್ಳ್ ಪಾಕಿಟ್ ಐತೆನ್ ಕ್ಯೋಳ್ತಿನ್ ತಡಿ ! ಲೈ, ಸುಮ್ಕ್ ನಾನ್ ಈಸ್ಕೊಟ್ಟಿದ್ದನ್ ಕುಡ್ದ್ ತೆಪ್ಪುಗ್ ಬಿದ್ಗಳದ್ ಕಲ್ಕಬೆಕು" ಎಂದು ರಾಮಣ್ಣ ಖಾರವಾಗಿ ಬಚ್ಚಪ್ಪನ ಚಪಲದ ಚಿಗುರನ್ನು ಚಿವುಟಿಹಾಕಿದ.

ಸ್ವಲ್ಪ ಹೊತ್ತಿಗೆ ಊಟದ ತಟ್ಟೆಗಳು ಬಂದವು.
ಕರ್ಚೀಫ್ ಅಗಲದ ತಟ್ಟೆಯ ಅರ್ಧಭಾಗವನ್ನು ಬರೀ ಚಮಚ ಲೋಟಾಗಳೇ ಆಕ್ರಮಿಸಿಕೊಂಡಿದ್ದವು.

ಉಳಿದದ್ದರಲ್ಲಿ ಒಂದು ಚಿನ್ನಾರಿ ಮುಚ್ಚಿದ್ದ ಬಟ್ಟಲಲ್ಲಿ ಅಲ್ಲಲ್ಲಿ ಅರಿಶಿನ ಚೆಲ್ಲಿದಂತಿದ್ದ ಬಿಸಿ ಬಿಸಿ ಒಣಕಲು ಅನ್ನ, ಒಂದೆರಡು ಸಪ್ಪೆ ಸೊಪ್ಪಿನ ದಂಟುಗಳು, ನಾಲ್ಕಾಣೆಯಗಲದ ಬೆಣ್ಣೆ, ಎಂಟಾಣೆಯಗಲದ ಬನ್ನು ಮತ್ತು ಒಂದು ಕುಂಕುಮದ ಭರಣಿಯಷ್ಟು ಕಲ್ಲಂಗಡಿ ಹಣ್ಣು ಇದ್ದವು.

ಅಕ್ಕಪಕ್ಕದವರನ್ನು ನೋಡಿಕೊಂಡು ಪ್ಯಾಕೆಟ್ಟುಗಳನ್ನು ಒಂದೊಂದಾಗಿ ಬಿಚ್ಚಿ ನೋಡಿದ ಬಚ್ಚಪ್ಪ

"ಇದ್ರಗ್ ಊಟ ಯಾವ್ದಪೋ?" ಎಂದು ಕೇಳಿದ.

ಅದೇ ಪ್ರಶ್ನೆಗೆ ಉತ್ತರ ಹುಡುಕುತ್ತಿದ್ದ ರಾಮಣ್ಣ "ಸುಮ್ಕ್ ಅಷ್ಟುನ್ನೂ ಒಂದುಂಡೆ ಮಾಡಿ ಬಾಯ್ಗಾಕ್ಕಳ್ಳ" ಎಂದ.

"ನಮ್ಮೂರ್ ಮಿಲ್ಟ್ರಿಓಟ್ಲು ಊಟುಕಿನ್ನ ಇವ್ರ್ ಕೊಟ್ಟಿರ ಔಸ್ದಿ ಬಲ್ ಪಸಂದಾಗದೆನೊ" ಎಂದು ಗೊಣಗಿಕೊಂಡು ಬಚ್ಚಪ್ಪ ಊಟದ ಶಾಸ್ತ್ರ ಮುಗಿಸಿದ.

ಸಿಂಗಾಪುರದಲ್ಲಿ ವಿಮಾನ ಬದಲಿಸಿದಾಗ ಯಾರ ನೆರವಿಲ್ಲದೆ ತಾನೇ ಬೆಲ್ಟು ಹಾಕಿಕೊಂಡ ಬಚ್ಚಪ್ಪ ವಿಮಾನ ಮೇಲೇರುತ್ತಿದ್ದಾಗ ಕಿಟಕಿಯಿಂದ ಒಪ್ಪವಾಗಿ ಜೋಡಿಸಿಟ್ಟ ಸಂಕ್ರಾಂತಿಯ ಸಕ್ಕರೆ ಅಚ್ಚುಗಳಂತೆ ಕಾಣುತ್ತಿದ್ದ ಸಿಂಗಾಪುರದ ಮುಗಿಲೆತ್ತರದ ಕಟ್ಟಡಗಳನ್ನು ನೋಡುತ್ತ ಈ ವಿಮಾನದಲ್ಲಾದರೂ ಒಂದಿಷ್ಟು ಟ್ರಿಬಲೆಕ್ಸ್ ಸಿಗಬಹುದೇ ಎಂದು ತುಟಿ ತೇವ ಮಾಡಿಕೊಂಡು ಕುಳಿತ.

ಅದೊಂದನ್ನು ಬಿಟ್ಟು ಪ್ರಪಂಚದ ಇನ್ನೆಲ್ಲ ಮದ್ಯಗಳನ್ನು ಹೊತ್ತಂತಿದ್ದ ಗಾಡಿ ಬಂದು ನಿಂತು ಅವನಾಸೆಯ ಮೇಲೆ ಮತ್ತೆ ತಣ್ಣೀರೆರಚಿ ಹೋಯಿತು.

ಇನ್ನೊಂದು ಸಪ್ಪೆರಡ್ಡು ಊಟ ಉಂಡು ಲೋಟದಲ್ಲಿದ್ದ ಕರಿ ಕಾಫಿಗೆ ಪುಟಾಣಿ ಪ್ಯಾಕೆಟ್ಟಿನಿಂದ ತಂಗಳು ಹಾಲು ಬೆರೆಸಿ ಕುಡಿದ ಬಚ್ಚಪ್ಪ ತಿಳಿಯದೆ ಡೆಟಾಲನ್ನು ನೆಕ್ಕಿರುವ ಬೆಕ್ಕಿನಂತೆ ಮುಖಮಾಡಿಕೊಂಡು ಟೀವಿಯಲ್ಲಿ ಬರುತ್ತಿದ್ದ ಇಂಗ್ಲಿಷ್ ಸಿನಿಮಾ ನೋಡುತ್ತಾ ತೂಕಡಿಸಿದ.

ಎಚ್ಚರಗೊಂಡಾಗ ಇಂಗ್ಲಿಷ್ ಸಿನಿಮಾದ ಗುಂಗಿನಿಂದಲೋ ಅಥವಾ ಪಾಶ್ಚಿಮಾತ್ಯರ ಪ್ಯಾಕೆಟ್ ನೀರು ಕುಡಿದಿದ್ದರಿಂದಲೋ ಏನೋ "ತಾಳೆಟ್ಗೋಬೇಕಪೋ.." ಎಂದ.

ಒಮ್ಮೆ ಹೋಗಿಬಂದು ಅನುಭವಿಯಾಗಿದ್ದ ರಾಮಣ್ಣ ಬಚ್ಚಪ್ಪನಿಗೆ ಮಾರ್ಗದರ್ಶನವಿತ್ತು,

"ನೀರಿನ್ ಗುಂಡಿ ಬುಟ್ ಬ್ಯಾರೆ ಯಾವ್ದನ ಒತ್ತ್‌ಗಿತ್ತೀಯ, ಇಮಾನ್ದಿಂದ್ ಆಚ್ಗಾಕ್ಬುಡ್ತೈತೆ" ಎಂದು ಎಚ್ಚರಿಸಿ ಕಳಿಸಿದ.

ಟಾಯ್ಲೆಟ್ಟಿನಿಂದ ಹೊರಬಂದಾಗ ಬಚ್ಚಪ್ಪನ ಕಣ್ಣುಗಳಲ್ಲಿ ಆಕಸ್ಮಿಕವಾಗಿ ಅಲಿಬಾಬಾನ ಗುಹೆಯೊಳಗಿನ ಅದ್ಭುತಗಳನ್ನು ಕಂಡುಹಿಡಿದ ಬೆರಗಿತ್ತು.

"ಎಲಾ ನನ್ಮಗುಂದೆ.!....ಗುಂಡಿ ಒತ್ದೇಟ್ಗೆ ಬಟ್ಲಗಿರದ್ನೆಲ್ಲ ಸೊಯ್ಕ್‌ಅಂತ ಒಳ್ಳೆ ಆನೆ ಕೆರೇಲ್ ನೀರೆಳ್ದಂಗ್ ಯಳ್ಕಬುಡ್ತದಲ್ಲಾ, ಇನ್ನೆಂತಾ ಮೆಕಾನಿಕ್ ಮಡ್ಗಿರ್ಬೋದು ಅದ್ರಗೆ!" ಎಂದು ಅರಳಿದ ಅವನ ಮುಖ ಮರುಕ್ಷಣವೇ ಅಲ್ಲಿಯ ಅತಿದೊಡ್ಡ ಕೊರತೆಯೊಂದನ್ನು ನೆನೆಸಿಕೊಂಡು ಸ್ವಲ್ಪ ಕುಂದಿತು.

"ಆದ್ರೆ ಈ ಪೇಪರ್ ಶಿಶ್ಟಮ್ಮು ಸಟ್ಟಾಯ್ಕಿಲ್ಲ ಬುಡಪ.." ಎಂದ.

"ಲೇ ಬಚ್ಚೆಗೌಡ, ಇನ್ನ್ ನಮ್ಮೂರ್ಗ್ ವಾಪಸ್ ಓಗಗಂಟ ಎಲ್ಲೂ ತೊಳ್‌ಗಿಳ್ಯೋ ಬಾಬತ್ತಿಲ್ಲ, ತಿಳ್ಕಬುಡು. ಎಲ್ಲೋದ್ರೂ ಬರೇ ಪೇಪರೇ ಗತಿ..."

"ಮುದ್ದುನ್ ಮನ್ಯಗೆ..?"

"ಅಲ್ಲೂವೆ.."

"ಯೇ..ಬೈಲ್ಗೋದ್ರಾಯ್ತು.."

"ಬೈಲ್ಗೋದ್ರ್ ಜೈಲ್ಗಾಕ್ತರೆ.!...ಆಮ್ಯಾಕ್ ಅಂಗೆಲ್ಲಾರ ಮಾಡಿ ಕುಲ್ಗೆಡ್ಸಿಕ್ಕೀಯಲೇ ತಿಕ್ಕುಲ್‌ಸುಬ್ಬ!"

ಬಚ್ಚಪ್ಪನ ಸಲಹೆಯನ್ನು ಮನಸ್ಸಿನಲ್ಲೇ ಚಿತ್ರಿಸಿಕೊಂಡ ರಾಮಣ್ಣ ಗಾಬರಿಯಾಗಿ ಗದರಿದ.

ಪಾಶ್ಚಿಮಾತ್ಯರ ಈ ಒಣ ಶೌಚಾಭ್ಯಾಸ ತನ್ನಿಂದ ತಿಂಗಳುಗಟ್ಟಲೆ ಸಾಧಿಸಲಾದೀತೇ ಎಂದು ಮಂಕಾಗಿ ಯೋಚಿಸುತ್ತ ಕಿಟಕಿಗೆ ತಲೆಯಿಟ್ಟ ಬಚ್ಚಪ್ಪ ಹೊಸೆದ

ಹತ್ತಿಯ ಮೆತ್ತನೆ ಹಾಸಿನಂತಿದ್ದ ಬಿಳಿಮೋಡವನ್ನು ನೋಡಿ ಜೋಂಪು ಹತ್ತಿ ಮತ್ತೆ ನಿದ್ದೆ ಹೋದ.

ಕನಸಿನಲ್ಲಿ ಮೋಹಿನಿ ಬಂದು ಅವನ ತಲೆಯನ್ನು ತನ್ನ ತೊಡೆಯಮೇಲಿಟ್ಟುಕೊಂಡು ನೇವರಿಸುತ್ತ ಕೆಂಪು ಹಲ್ಲುಗಳ ನಗೆ ಸೂಸಿ

"ಯಾಕಿಂಗ್ ಯೇಚ್ನೆ ಮಾಡೀ ಬುಡತ್ಲಗೆ....ಎಲ್ಲಾ ಸರೋಯ್ತದೆ" ಎಂದು ಸಮಾಧಾನ ಮಾಡುತ್ತಿದ್ದಳು.

ಸಣ್ಣಗೆ ತಿಣುಕುತ್ತ ಗಾಳಿಯನ್ನು ಗುದ್ದುತ್ತ ಕಾಲು ಝಾಡಿಸಿ ಧಡಕ್ಕನೆ ಎದ್ದು ಕುಳಿತ ಬಚ್ಚಪ್ಪ ಕೋರೆ ಒರೆಸಿಕೊಂಡು ಚೇತರಿಸಿಕೊಳ್ಳುವ ಹೊತ್ತಿಗೆ ವಿಮಾನ ಬಿಳಿಮೋಡದ ಹಾಸನ್ನು ಸೀಳಿಕೊಂಡು ರೆಕ್ಕೆಯಂಚುಗಳನ್ನು ಓರೆಮಾಡಿಕೊಂಡು ಆಕ್ಲೆಂಡಿನ ಹಚ್ಚ ಹಸಿರಿನ ಅಂಗಳಕ್ಕೆ ಇಳಿಜಾರು ಮಾಡಿಕೊಳ್ಳತೊಡಗಿತ್ತು.

No comments:

Post a Comment