Friday, April 24, 2009

Ramanna & Bachche Gowda (Part-4) ಇಮಾನ ಒಳ್ಡತಾವ್ ಮೋಯ್ನಿ ಅಡ್ಡಾಕ್ತಳಂತೆ?


ತನ್ನ ಭಾಮೈದನ ನೆಲೆಸೂರಾದ ನ್ಯುಜೀಲೆಂಡಿಗೆ ಪ್ರವಾಸ ಹೊರಟಿದ್ದ ರಾಮಣ್ಣ ಮತ್ತು ಅವನ ಬಲಗೈ ಬಂಟ ಬಚ್ಚಪ್ಪ ಬೆಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ತಪಾಸಣೆಯ ಸಾಲಿನಲ್ಲಿ ನಿಂತಿದ್ದರು.

ವಿಮಾನ ಹತ್ತುವುದಕ್ಕೆ ಮುಂಚೆಯೇ ಅವರಿಗೆ ಬೆಂಗಳೂರಿನಿಂದ ಈಗಾಗಲೇ ಬಹಳ ದೂರ ಹೊರಟುಹೋಗಿದ್ದಂತೆ ಭಾಸವಾಗಿಸುತ್ತಿತ್ತು ಅಲ್ಲಿಯ ವಾತಾವರಣ.
ಎಲ್ಲೆಡೆ ಲಾಲೂ ಯಾದವ್ ತಮ್ಮಂದಿರಂತಿದ್ದ ಪೇದೆಗಳು, ಐದು ಹೆಜ್ಜೆಗೊಮ್ಮೆ ಅವರಿವರ ಪಾಸ್‌ಪೋರ್ಟುಗಳನ್ನು ತೆರೆದು ನೋಡುವ ಚಟವಿದ್ದಂತಿದ್ದ ಕೋಟುಧಾರೀ ಚಿತ್ರಗುಪ್ತರು,

ಬಚ್ಚಪ್ಪ ಟಿಕೆಟ್ಟು ತೋರಿಸಿ "ಇದ್ಕೆಲ್ ನಿಂತ್ಗಬೇಕವ್ವ?" ಎಂದರೆ "ಗೋ ದಟ್ ಕ್ಯೂ" ಎಂದುತ್ತರಿಸುವ ಆಂಗ್ಲಮೋಹೀ ಸ್ಥಳೀಯರು.

ಲಾಗಾಯ್ತಿನಿಂದ ಪರಿಚಿತವಾಗಿದ್ದ ನಿದ್ರಾಲೋಲ ದೇವನಹಳ್ಳಿಯಲ್ಲಿ ಇದೊಂದು ಪರಕೀಯರ ದ್ವೀಪವಿದ್ದಂತೆ ತೋರುತ್ತಿತ್ತು. ತಪಾಸಣೆಗೆ ಬಚ್ಚಪ್ಪನ ಸರದಿ ಬಂದಾಗ ಖಾಲಿಯಾಗಿದ್ದ ಹೆಂಗಸರ ಸಾಲಿಗೆ ಕಳುಹಿಸಿದರು.

ಅಲ್ಲಿದ್ದ ಸದ್ರುಢ ಹೆಣ್ಣು ಪೇದೆ ಅವನ ಎರಡೂ ಕೈಗಳನ್ನು ಸೂರ್ಯನಮಸ್ಕಾರಕ್ಕೆಂಬಂತೆ ಮೇಲ್ಮಾಡಿಸಿ ಬರಸೆಳೆದು ಮೈದಡವುತ್ತ ಕೈಲಿದ್ದ ಮೆಟಲ್ ಡಿಟೆಕ್ಟರನ್ನು ಆತ್ಮೀಯತೆಯಿಂದ ಎಲ್ಲೆಡೆ ಓಡಾಡಿಸಿ ಬಿಡುಗಡೆಯಿತ್ತಳು.
ಎಕ್ಸ್‌ರೇ ಮೆಷೀನಿನಿಂದ ಹೊರಬರುತ್ತಿದ್ದ ಬಚ್ಚಪ್ಪನ ಕೈಚೀಲವನ್ನು ಅಲ್ಲೇ ಪಕ್ಕದಲ್ಲಿ ನಿಂತುಕೊಂಡು ಮೂಗಿನೊಳಗೆ ಬೆರಳಾಡಿಸುತ್ತಿದ್ದ ಲಾಲೂ ತಮ್ಮಾಜಿಯೊಬ್ಬ ತಡೆಹಿಡಿದು,

"ಮಸೀಣಮೇ ಇಸಕೆ ಬಿತ್ತರ್ ಬೋತಲ್ ದಿಕೆ. ಖೊಲೀಕ್ ಪಡಿ" ಎಂದ,
ಬೆರಳನ್ನು ಹೊರತೆಗೆದು ಫಲಿತಾಂಶವನ್ನು ಪರೀಕ್ಷಿಸುತ್ತ.

ಫಲಿತಾಂಶದ ವೀಕ್ಷಣೆಯಲ್ಲಿ ತನ್ಮಯನಾಗಿ ಪಾಲ್ಗೊಳ್ಳತೊಡಗಿದ್ದ ಬಚ್ಚಪ್ಪ ಎಚ್ಚೆತ್ತು "ಯೇನ್ಸೋಮಿ?" ಎಂದ.

ದೂರದರ್ಶನದ ಕೃಪೆಯಿಂದ ಹಿಂದಿಯಲ್ಲಿ ಅಲ್ಪಸ್ವಲ್ಪ ಪಳಗಿದ್ದ ರಾಮಣ್ಣ "ಆ ಮಸೀನ್ಗೆ ನಿನ್ ಬ್ಯಾಗೊಳ್ಗೇನೊ ಬಾಟ್ಲು ಕಾಣ್ತದಂತೆ ಕಣ್ಲೆ, ಅದೇನೈತೋ ತಗುದ್ ತೋರ್ಸತ್ಲಗೆ" ಎನ್ನುತ್ತ ತಾನೇ ಮುಂದಾಗಿ ಬ್ಯಾಗು ತೆರೆದಿಟ್ಟ.

ಲಾಲೂ ಸಿಂಗ್ ತನ್ನ ಇದೀಗ ಪವಿತ್ರಗೊಳಿಸಿದ ಕೈಯನ್ನು ಬ್ಯಾಗಿನೊಳಗೆಲ್ಲ ಆಡಿಸಿ ಅರ್ಧತುಂಬಿದ ಹಳೇ ಟ್ರಿಪಲೆಕ್ಸ್ ರಮ್ ಬಾಟಲೊಂದನ್ನು ಈಚೆಗೆಳೆಯುತ್ತ "ಇಸಮೇ ಕಾ ಹೆ?" ಎಂದು ಬಚ್ಚಪ್ಪನ ಕಡೆ ದರ್ಪದ ಹುಬ್ಬಾಡಿಸಿದ.

"ಅಳ್ಳೆಣ್ಣೆ" ಎಂದ ಬಚ್ಚಪ್ಪ, ಅವನ ದರ್ಪಕ್ಕೆ ಮಣಿಯದೆ.

ಸುದೀರ್ಘ ಚರ್ಚೆಯ ನಂತರ ಕೈಚೀಲದಲ್ಲಿ ಒಂದೆರಡು ಚಮಚೆಗಿಂತ ಹೆಚ್ಚಾಗಿ ಯಾವ ದ್ರವ್ಯಗಳನ್ನೂ ಕೊಂಡೊಯ್ಯುವಂತಿಲ್ಲವೆಂಬುದು ಮನದಟ್ಟಾಗಿ ಬಾಟಲನ್ನು ಅಲ್ಲೇ ಕಸದ ಬುಟ್ಟಿಗೆ ಎಸೆದ ಬಚ್ಚಪ್ಪ ರೋಸಿ "ಒಟ್ಟ್‌ತುಂಬ ನೀರ್ ಕುಡ್ದಿವ್ನಿ, ಅದ್ನು ಬುಡ್ತನಾ ಇಲ್ಲಾ ಇಲ್ಲೇ ಉಯ್ದೋಬೆಕ ಕೇಳವುನ್ನ" ಎಂದು ಭುಸುಗುಡುತ್ತ ಮುಂದೆ ನಡೆದ.

ಇಬ್ಬರೂ ಪ್ರಯಾಣಿಕರ ನಿರೀಕ್ಷಣಾ ಕೊಠಡಿಯೊಳಕ್ಕೆ ಕಾಲಿಟ್ಟು ಸುತ್ತ ಕಣ್ಣುಹಾಯಿಸಿದರು.

ಅಲ್ಲಲ್ಲಿ ಇವರಂತೆ ಮೊದಲಬಾರಿಗೆ ವಿಮಾನ ಹತ್ತಲಿದ್ದವರು ತಮ್ಮ ಬ್ಯಾಗು ಟಿಕೆಟ್ಟುಗಳನ್ನು ಮತ್ತೆ ಮತ್ತೆ ಭದ್ರಪಡಿಸಿಕೊಳ್ಳುತ್ತ ಪೇಟೆಯಲ್ಲಿ ಸಿನಿಮಾ ನೋಡಲು ಹೊರಟಿರುವ ಹಳ್ಳಿ ಹುಡುಗರಂತೆ ಉತ್ಸುಕರಾಗಿ ಅಕ್ಕಪಕ್ಕದವರನ್ನು ನೋಡುತ್ತ ಕುಳಿತಿದ್ದರು.

ಅವರ ಅನನುಭವೀ ಚರ್ಯೆಗಳನ್ನು ಇದೀಗ ಎರಡನೇ ಬಾರಿ ವಿಮಾನ ಪ್ರಯಾಣ ಮಾಡಲಿದ್ದವರು ತಾತ್ಸಾರದ ಹುಬ್ಬುಗಂಟಿಕ್ಕಿ ಗಮನಿಸುತ್ತಿದ್ದರು, ನೂರಾರು ಬಾರಿ ದೇಶಾಟನೆ ಮಾಡಿ ನುರಿತವರಂತೆ ನಟಿಸುತ್ತ.

ನಿಜವಾಗಿಯೂ ನೂರಾರು ಬಾರಿ ಪ್ರಯಾಣ ಮಾಡಿದ್ದವರು ಯಾರೂ ಇಲ್ಲದ ಮೂಲೆಗಳನ್ನು ಹುಡುಕಿ ಪೇಪರು ಪುಸ್ತಕಗಳಲ್ಲಿ ಮಗ್ನರಾಗಿದ್ದರು.

"ಆವಮ್ಮ ಯಾಕ್ ನನ್ನ್ ಅಂಗ್ ಮೈದಡ್ವಿ ನೋಡಿದ್ದು?" ಬಚ್ಚಪ್ಪ ಖಾಲಿಯಿದ್ದ ಕೆಲವು ಸಾಲುಕುರ್ಚಿಗಳ ಕಡೆ ಹೆಜ್ಜೆಯಿಡುತ್ತ ಕೇಳಿದ.

"ಈಟಗ್ಲ ಕೋಟು ಪ್ಯಾಂಟಾಕಿರವ್ನು ಎಲ್ಲೋ ದಾರಾಸಿಂಗ್ ತಮ್ಮ್‌ನೇ ಇರ್ಬೇಕು ಅಂತ ಮುಟ್ ನೋಡವ್ಳೇಳೊ" ಎಂದ ರಾಮಣ್ಣ,
ಮತ್ತೆ ಬಚ್ಚಪ್ಪನ ಸಡಿಲ ಬಟ್ಟೆಗಳ ಗೇಲಿಗಿಳಿಯುತ್ತ.

"ಅದಲ್ಲಪೋ, ಅದೆಂತದೋ ಮೀಟ್ರ ಮೈಮ್ಯಾಗೆಲ್ಲ ಓಡಾಡ್ಸುದ್ಲಲ್ಲ....ಅದೇ, ನನ್ನ್ ತಾಯ್ತುದ್ ತಾವ್ ಕೀ ಕೀ ಅಂತ್ ಬಡ್ಕಣ್ತಲ್ಲ, ಅದೇನ್ಕೇಂತ?"

"ಒಟ್ಟೆ ತಾವ್ ಚಾಕೂ ಚೂರೀ ಬಾಂಬು ಬಟ್ರೆ ಏನಾರ ಅವ್ತಿಟ್ಗಂಡೀಯೆನೋ ಅಂತ್ ನೋಡಕ್ ಕಣ್ಲೆ"

"ಓ?......ಬಾಂಬ ಮಡೀಕಂಡೇ ಬಂದಿರೋರ್ನ ಈಪಾಟಿ ತಬ್ಗ್ಯಂಡ್ ಮುದ್ದಾಡುದ್ರೆ ಅದು ಡಮ್ ಅನ್ಬುಡಕುಲ್ವೆ?"

"ಅನ್ನ್‌ದೆ ಮತ್ತಿಗ!" ಎಂದ ರಾಮಣ್ಣ, ನಗು ಹತ್ತಿಕ್ಕಿ.

"ಅದ್ಕೆ ಆ ಮೀಟ್ರು ಓಡ್ಸೋ ಕೆಲ್ಸುಕ್ಕೆ ದಿನಾ ಲಾಟ್ರಿ ತಗಿತರಂತೆ ಕಣ. ಯಾರೆಸ್ರು ಬತ್ತದೋ ಅವ್ರೆಸ್ರಲ್ ಮಿಕ್ಕೋರು ದ್ಯಾವುರ್ಗ್ ಅರ್ಚ್ನೆ ಮಾಡುಸ್ತರಂತೆ"

".....ಸಾಬ್ರೆಸ್ರು ಬಂದ್ರೆ?"

"ಥೂ ಆಳಾಗೋಗ್ಲಿ ಬುಡ್ಲ.." ಎಂದ ರಾಮಣ್ಣ, ಯಾರಿಗೂ ಹೊಳೆಯದ ಪ್ರಶ್ನೆಗಳನ್ನು ಕೇಳುವ ಬಚ್ಚಪ್ಪನ ಅಪೂರ್ವ ಕಲೆಗೆ ಮತ್ತೊಮ್ಮೆ ಸೋಲುತ್ತ.

ಬಚ್ಚಪ್ಪ ಕೈಚೀಲವನ್ನು ಸಾಲುಕುರ್ಚಿಯೊಂದಕ್ಕೊರಗಿಸಿ ಕಿಟಕಿಯಾಚೆ ನೋಡಿದ.

ಮುಸ್ಸಂಜೆಯ ಮಬ್ಬು ಕತ್ತಲೆಯಲ್ಲಿ ತಮ್ಮ ಬೆಳ್ಗೊಳಕ್ಕೆ ಮರಳುತ್ತಿರುವ ಹಂಸಗಳಂತೆ ವಿಮಾನಗಳು ಬಿಂಕದಿಂದ ಬಂದಿಳಿಯುವುದೂ, ಸ್ವಲ್ಪ ಹೊತ್ತಿಗೆ ಏನೋ ಮರೆತಂತೆ ಮತ್ತೆ ಅದೇ ಪ್ರಯಾಸವಿಲ್ಲದ ಬೆಡಗಿನಿಂದ ರೆಕ್ಕೆ ಮಿಡಿಯದೆ ಹಾರಿಹೋಗುವುದನ್ನು ಎವೆಯಿಕ್ಕದೆ ನೋಡುತ್ತಾ,

"ಈ ಇಮಾನ್ಗೋಳು ರೆಕ್ಕೆ ಬಡಿದಲೆನೆ ಅದೆಂಗ್ ಮ್ಯಾಕ್ಕೊಯ್ತವಪ್ಪ" ಎಂದ.

"ಇವಗ್ ಅನ್ಮಂತ ರೆಕ್ಕೆ ಬಡಿದಲೆ ಲಂಕೆಗ್ ಆರ್ಕಂಡ್ ಓಗ್ಬರ್ಲಿಲ್ವ? ಅಂಗೇ..." ತಾಂತ್ರಿಕ ಉತ್ತರ ಕೊಡಲಾಗದೆ ಉಪಮಾನದ ಉಪೇಕ್ಷೆಗೆ ಮೊರೆಹೋದ ರಾಮಣ್ಣ.

"ಕೈ ಅಗಲ್ವಾಗಿಕ್ಕಂಡ್ ಪಾಷ್ಟಾಗ್ ಓಡುದ್ರೆ ನೀನೂ ಮ್ಯಾಕ್ ಓಬೋದೇಳ" "ಅದ್ಸರೀನ್ನು...ಕೈ ಅಗುಲ್ವಾಗಿಟ್ಗಣದೇನ್ ಬ್ಯಾಡ...ಆ ಅಲ್ಸೂರಗ್ ರೋಡ್ ದಾಟದ್ ವಸಿ ತಡ್ವಾದ್ರಾಯ್ತು, ಬಸ್ಸು ಲಾರಿಗುಳೇ ಚಕ್ ಅಂತ ಮ್ಯಾಕ್ ಕಳುಸ್‌ಬುಡ್ತವೆ....ಆರಾಡ್ಕಂಡಿರ್ಲೀಂತ" ಎಂದ ಬಚ್ಚಪ್ಪ.

ಮೇಲಕ್ಕೆ ಹೋಗುವ ಮಾತು ಬಂದೊಡನೆ ಅವನ ತಲೆಯಲ್ಲಿ ಕೊರೆಯುತ್ತಿದ್ದ ಇನ್ನೊಂದು ವಿಷಯ ಪ್ರಸ್ತಾಪಿಸಿದ.

"ಔದೂ, ಈ ಇಮಾನ ಮ್ಯಾಕ್ಕೋಗೋ ತಾವ ಯಾವ್ದೋ ಬೀಳೀ ಸೀರೆ ಉಟ್ಗಂಡಿರೋ ಮೋಯ್ನಿ ಅಡ್ಡ್ ಬತ್ತಳಂತ್ ಔದೇನಪೊ?"

"ಊಂ ಕಣ್ಲೆ......ಕತ್ತ್ಲಾದ್ಮೇಲ್ ಒಲ್ಡೋ ಇಮಾನ್ಗುಳ್ನ್ ಅಡ್ಡಾಕ್ತದಂತೆ...." ರಾಮಣ್ಣ ಮುಖ ಬಿಗಿ ಹಿಡಿದು ಬಚ್ಚಪ್ಪನ ಕಡೆ ನೋಡಿದ.

"ಇನ್ನೇನ್ ಕತ್ಲಾಯ್ತಾದಲಪ..." ಎಂದ ಬಚ್ಚಪ್ಪ ತವಕದಿಂದ, ರಾಮಣ್ಣನ ಕಣ್ಣಲ್ಲಿ ಕೀಟಲೆಯ ಕುರುಹು ಹುಡುಕುತ್ತ.

"ಇಲ್ಲೇಳ, ಅದ್ ಅಮಾಸೆ ದಿನ ಮಾತ್ರನಂತೆ ಬರದು.."

ರಾಮಣ್ಣ ಇಲ್ಲದ ಆಕಳಿಕೆ ಬರಿಸಿಕೊಂಡು ಅಂಗೈಯಲ್ಲೇನೋ ಹುಡುಕತೊಡಗಿದ.

"ಅಯ್, ಇವತ್ತೇ ಅಲ್ವ ಅಮಾಸೆ !" ಬಚ್ಚಪ್ಪನ ತವಕ ನಸುಗಾಬರಿಗೆ ತಿರುಗಿತು.

"ಥೂ ಅದ್ಯಾಕಂಗಾಡೀ ಬುಡ್ಲ, ಅದ್ ಬರೀ ಸಡ್ಲ ಪ್ಯಾಂಟ್ ಆಕಿರೋರ್ಗೇನಂತೆ ಕಾಣದು..." ಎನ್ನುತ್ತ ರಾಮಣ್ಣ ಬಚ್ಚಪ್ಪನ ಪೇಚಿಗೆ ಮೈಯೆಲ್ಲ ಕುಲುಕಿಸಿ ನಕ್ಕ.

"ಯಾಕ್ ಮೋಯ್ನಿ ಸಂದಾಗಿದ್ರೆ ಒಳುಕ್ ಕರ್ದು ಪಕ್ದಾಗ್ ಕೂರ್ಸ್ಕಂಡೀಯಾ?"

"ಯೇ, ಅವು ಕರ್‍ಯೋಗಂಟ ಇದ್ದಾವಾ? ಗಾಳೀಗ್ ಬಂದು ಅಂಗೆ ಮೈಯಗ್ ಸೇರ್ಕಬುಡಲ್ವೆ..!" ಎಂದ ಬಚ್ಚಪ್ಪ, ಸ್ವಲ್ಪ ನಿರಾಳದ ಉಸಿರೆಳೆಯುತ್ತ.

"ಒಹೊಹೊ....ರಮ್ಮೊಳಿಕ್ ಕೋಲ ಸೇರ್ಕಬುಟ್ಟಂಗೆ ನನ್ಮಗುಂದು ! ಬಾಕ್ಲು ಸೊಂದಗ್ ಅವ್ ಬರ್ಬೌದು, ಆದ್ರೆ ಸೀರೆ ಸಿಗಾಕ್ಕಬುಡ್ತದಲಪ!

ಅಂದಂಗೇ....ಈ ನಿಮ್ಮ್ ಮೋಯ್ನಿಗುಳೆಲ್ಲ ಯಾಕ್ ಯಾವಾಗೂ ಬಿಳೀ ಸೀರೇನೇ ಉಟ್ಗಂಡ್ ಓಡಾಡ್ತವ್ಲ?"

"ಕತ್ಲಾಗ್ ಕಾಣ್ಬ್ಯಾಡ್ವೆ?"

"ಓ...ಅಂಗೆ.!.....ಗೆಜ್ಜೆ ಆಕ್ಕಮದೂ?

ಕುಳ್ಡ್ರು ಅಡ್ಬಂದ್ರೆ ಕೇಳ್ಲೀ ಅಂತನೆನೋ? ಯಾಕ್ ಒಂದ್ ಸೈಕಲ್ ಬೆಲ್ಲು ಮಡಿಕಬುಡ್ಲೇಳು....ಟ್ರಿನ್ ಟ್ರೀನ್....ಮೋಯ್ನಿ ಬಂತು ಮೋಯ್ನೀ...ದಾರಿಬುಡೀ, ಅಂತ..........ಪೆಕರ್ ನನ್ಮಗುನ್ ತಂದು" ರಾಮಣ್ಣ ಅಸಹನೆಯಿಂದ ಮೂದಲಿಸಿದ.

"ನಿಮ್ಮಂತೋರಿಂದ್ಲೆ ಕಣ್ಲ ನಮ್ ದೇಸ್ದಗ್ ಗಲ್ಲಿಗೊಬ್ಬ ಗಿಣಿಸಾಸ್ತ್ರ ಯೇಳವ್ನು ಬೀದಿಗೊಬ್ಬ ಬುಡ್ಬುಡ್ಕೆ ಬಾಬ ಉಟ್ಗಂಡಿರದು.....ಮೋಯ್ನಿಯಂತೆ ಮೋಯ್ನಿ.....ಯಾವ್ತಾರ ಕಂಡೀಯೇನ್ಲ ಕಣ್ಣಗೆ? ಯಾವನೋ ಪಂಗ್ನಾಮ ಆಕೋ ಸಿಂಗ್ಳೀಕ ಯೋಳ್ತನೆ ನೀನ್ ಪೆಂಗ್ನಂಗ್ ಕ್ಯೋಳುಸ್ಕಂಬ..! "

"ಇವಗ್ ನೀನ್ ದ್ಯಾವುಸ್ತಾನುಕ್ ಓಗಲ್ವೇ....ನೀನೇನ್ ದ್ಯಾವುರ್ನ್ ಕಣ್ಣಾರೆ ಕಂಡೀಯಾ?...ಅಂಗೇಯ ಇದೂವೆ...ಅವ್ರವ್ರ್ ನಂಬ್ಕೆ" ಎಂದ ಬಚ್ಚಪ್ಪ ಸೋಲದೆ.

"ಲೈ, ನಾನ್ ದ್ಯಾವುಸ್ತಾನುಕ್ ಓಗದೂ ಅಬ್ಬ ಅರಿದಿನಾಂತ್ ಮಾಡದೂ ನಮ್ಮ್ ಇರೇಕುರ್ ಸಂಪುರ್ದಾಯ್ಗುಳ್ನ ಮುಂದ್ವರ್ಸ್ಕಂಡ್ ಓಗಕ್ಕೆ - ದ್ಯಾವುರ್ ಮೆಚ್ಲೀಂತ ದಕ್ಸ್ಣೆ ಆಕಕ್ಕೂ ಅಲ್ಲ ದೆವ್ವ್‌ಗುಳ್ ಬುಡ್ಸೂಂತ್ ಕೋಳಿ ಕೂಸಕ್ಕೂ ಅಲ್ಲ. ದ್ಯಾವುರ್ ಮೇಲ್ ಬಾರ ಆಕ್ದೋರ್ಗ್ ಯಾವ್ತಾರ ನೆಮ್ದಿ ಸಿಗ್ಬೋದೆನೊ, ಮಂತುರ್ವಾದಿ ಮೇಲ್ ಬಾರ ಆಕ್ದೋರ್ಗ್ ಯಾವತ್ತೂ ನೆಮ್ದಿ ಇಲ್ಲ, ತಿಳ್ಕ....ಸುಮ್ಕ್ ಎಂಗಂದ್ರಂಗ್-"
ಎನ್ನುವಷ್ಟರಲ್ಲಿ ಆಕಾಶವಾಣಿಯಲ್ಲಿ ಪ್ರಯಾಣಿಕರು ವಿಮಾನದೊಳಗೆ ಹೋಗಲು ಅನುವಾಗಿ ಎಂಬ ಸೂಚನೆ ಬಂತು.

ವಿಮಾನದಲ್ಲಿ ಸೀಟು ಸಿಗುವುದೋ ಇಲ್ಲವೋ ಎಂಬಂತೆ ಎಲ್ಲರೂ ಸರಸರನೆ ಸುರಂಗದ ಬಾಗಿಲ ಬಳಿ ಸಾಲಾಗಿ ನಿಂತರು. ಇವರೂ ಮಿಕ್ಕವರನ್ನು ಹಿಂಬಾಲಿಸಿ ವಿಮಾನದ ಬಾಗಿಲಿಗೆ ಬಂದರು.

ಬಚ್ಚಪ್ಪ ಒಳಗೆ ಹೆಜ್ಜೆ ಇಡುತ್ತಿದ್ದ ಹಾಗೇ ಬಾಗಿಲಲ್ಲಿದ್ದ ಲಲನಾಮಣಿ ಕೈಜೋಡಿಸಿ "ನಮಶ್ಕಾರ್ !" ಎಂದಳು. ನಮಸ್ಕಾರ ಎಲ್ಲರಿಗೂ ಮಾಡುತಿದ್ದಳೆಂಬುದನ್ನು ಗಮನಿಸದ ಬಚ್ಚಪ್ಪ ವಿಸ್ಮಯಗೊಂಡು

"ಯಾರೋ ಗುರ್ತ್‌ಸಿಗುಲ್ವೇ..."
ಎಂದು ರಾಗವೆಳೆಯುತ್ತಿದ್ದಹಾಗೆ ರಾಮಣ್ಣ ಅವನನ್ನು ಅವಸರವಾಗಿ ಸೀಟುಗಳ ಕಡೆಗೆ ತಳ್ಳಿಕೊಂಡು ಒಳನಡೆದ.

ಒಳಗಿದ್ದೊಬ್ಬ ಪರಿಚಾರಕ ಇವರ ಕೈಲಿದ್ದ ಚೀಟಿ ನೋಡಿ ಸೀಟಿಗೆ ತೋರಿಸಿ ಬೆಲ್ಟು ಹಾಕಿಸಿದ.

ವಿಮಾನ ಹೊರಟಾಗ ಮುಂದಿನ ಸೀಟನ್ನು ಭದ್ರವಾಗಿ ತಬ್ಬಿ ಹಿಡಿದಿದ್ದ ಬಚ್ಚಪ್ಪ ಅದು ಮೇಲಕ್ಕೆ ಹಾರಿ ಅದುರುವುದು ನಿಂತ ಮೇಲೆ ನೆಮ್ಮದಿಯಾಗಿ ಹಿಂದಕ್ಕೊರಗಿ ಕುಳಿತ.

ಸ್ವಲ್ಪ ಹೊತ್ತಿಗೆ ಏರ್ ಹೋಸ್ಟೆಸ್ ಒಬ್ಬಳು ಕೈಲಿದ್ದ ಚೀಟಿ ಓದುತ್ತ ಸೀಟು ನಂಬರುಗಳನ್ನು ಗಮನಿಸುತ್ತ ಇವರ ಕಡೆಗೆ ಬಂದಳು.

"ಅಗಳೋ, ಯಾವ್ದೋ ಮೋಯ್ನಿ ಏನೋ ಪೇಪರಿಡ್ಕಂಡ್ ನಿನ್ ಕಡೀಕೆ ಬತ್ತಾವ್ಳೆ.." ಎಂದ ರಾಮಣ್ಣ.

ಬಳಿಗೆ ಬಂದ ಅವಳು ಪ್ರಶ್ನಾರ್ಥಕವಾಗಿ "ಸರ್, ಹ್ಯಾವ್ ಯೂ ಬುಕ್ಡ್ ಎ ಸ್ಪೆಶಲ್ ವೆಜಿಟೇರಿಯನ್ ಮೀಲ್?" ಎಂದಳು. ಇಬ್ಬರೂ ಒಬ್ಬರನ್ನೊಬ್ಬರು ನೋಡಿಕೊಂಡರು.

ರಾಮಣ್ಣ ಪ್ರಯಾಣಕ್ಕಾಗಿ ಕಲಿತ ಪದಗಳಲ್ಲಾಗಲೀ ಬರೆಸಿಕೊಂಡು ಬಂದಿದ್ದ ಚೀಟಿಗಳಲ್ಲಾಗಲೀ ಈ ಸದ್ದುಗಳು ಇರಲಿಲ್ಲ.

ಪಕ್ಕದಲ್ಲಿದ್ದವನನ್ನು "ಏನಂತ್ ಸೋಮಿ ಈವಮ್ಮ ಕ್ಯೋಳ್ತಿರದು?" ಎಂದು ಕೇಳಿದ.

"ನೀವು ಸ್ಪೆಶಲ್ ಊಟಕ್ ಏನಾದ್ರೂ ಹೇಳಿದ್ರಾ ಅಂತ ಕೇಳ್ತಿದರೆ" ಎಂದು ಆತ ವಿವರಿಸಿದ.

ಬಚ್ಚಪ್ಪ ಥಟ್ಟನೆ "ಪೆಸಲ್ ಏನಿಲ್ರ, ಮುದ್ದೇ ಉಪ್ಪೆಸ್ರಾದ್ರಾಯ್ತೂಂತ್ ಯೋಳ್ಬುಡ್ರಣ" ಎಂದ.

ರಾಮಣ್ಣ ಬಚ್ಚಪ್ಪನನ್ನು ಕಣ್ಣಲ್ಲೇ ಸುಡುವಂತೆ ದುರುಗುಟ್ಟುತ್ತಾ

"ಲೈ, ಇದೇನ್ ನಿಮ್ಮ್ ಗುಳುವ್ನಳ್ಳಿ ಮಿಲ್ಟ್ರಿ ಓಟ್ಲು ಅನ್ಕಂಡೀಯ? ಅಮಿಕ್ಕಂಡ್ ಕುಂತ್ಗಬೆಕು ಅಂತೇಳಿರ್ಲಿಲ್ಲ?" ಎಂದು ಉಗ್ರವಾಗಿ ಪಿಸುಗುಟ್ಟಿ ಪಕ್ಕದವನಿಗೆ,

"ನಮ್ ತಿಗೀಟ್ ಮಾಡ್ದೋರ್ ಯೋಳಿರ್ಬೊದೆನೊ.. ಯಾವ್ದಾದ್ರಾಯ್ತು ಅಂತೇಳಿ ಸೋಮಿ" ಎಂದು ವಿನಮ್ರವಾಗಿ ವಿನಂತಿಸಿದ.

"ಸುಮ್ನೆ ಹೂಂ ಅನ್ನಿ, ಯಾವ್ದಾದ್ರೂ ಆಯ್ತು ಅಂದ್ರೆ ದನದ್ ಗಿನದ್ ಹಾಕ್ಕೊಟ್ಬುಟ್ಟಾರು" ಎನ್ನುತ್ತ ಪಕ್ಕದವನು ಇವರ ಪರವಾಗಿ ತಲೆಯಾಡಿಸಿದ.

ಅವಳು ಅತ್ತ ಹೋಗುತ್ತಿದ್ದಂತೆ ಪಾನೀಯಗಳ ಗಾಡಿ ಬಂದು ನಿಂತಿತು.

ಪಕ್ಕದವನು ವಿಸ್ಕಿ ಹಾಕಿಸಿಕೊಂಡಿದ್ದನ್ನು ನೋಡಿದ ಬಚ್ಚಪ್ಪ ಉತ್ಸಾಹದಿಂದ "ತ್ರಿಬ್ಲೆಕ್ಸು ಐತೇನ್ ಕ್ಯೋಳವ?" ಎಂದ.

"ಯಾಕ್ ಕಳ್ಳ್ ಪಾಕಿಟ್ ಐತೆನ್ ಕ್ಯೋಳ್ತಿನ್ ತಡಿ ! ಲೈ, ಸುಮ್ಕ್ ನಾನ್ ಈಸ್ಕೊಟ್ಟಿದ್ದನ್ ಕುಡ್ದ್ ತೆಪ್ಪುಗ್ ಬಿದ್ಗಳದ್ ಕಲ್ಕಬೆಕು" ಎಂದು ರಾಮಣ್ಣ ಖಾರವಾಗಿ ಬಚ್ಚಪ್ಪನ ಚಪಲದ ಚಿಗುರನ್ನು ಚಿವುಟಿಹಾಕಿದ.

ಸ್ವಲ್ಪ ಹೊತ್ತಿಗೆ ಊಟದ ತಟ್ಟೆಗಳು ಬಂದವು.
ಕರ್ಚೀಫ್ ಅಗಲದ ತಟ್ಟೆಯ ಅರ್ಧಭಾಗವನ್ನು ಬರೀ ಚಮಚ ಲೋಟಾಗಳೇ ಆಕ್ರಮಿಸಿಕೊಂಡಿದ್ದವು.

ಉಳಿದದ್ದರಲ್ಲಿ ಒಂದು ಚಿನ್ನಾರಿ ಮುಚ್ಚಿದ್ದ ಬಟ್ಟಲಲ್ಲಿ ಅಲ್ಲಲ್ಲಿ ಅರಿಶಿನ ಚೆಲ್ಲಿದಂತಿದ್ದ ಬಿಸಿ ಬಿಸಿ ಒಣಕಲು ಅನ್ನ, ಒಂದೆರಡು ಸಪ್ಪೆ ಸೊಪ್ಪಿನ ದಂಟುಗಳು, ನಾಲ್ಕಾಣೆಯಗಲದ ಬೆಣ್ಣೆ, ಎಂಟಾಣೆಯಗಲದ ಬನ್ನು ಮತ್ತು ಒಂದು ಕುಂಕುಮದ ಭರಣಿಯಷ್ಟು ಕಲ್ಲಂಗಡಿ ಹಣ್ಣು ಇದ್ದವು.

ಅಕ್ಕಪಕ್ಕದವರನ್ನು ನೋಡಿಕೊಂಡು ಪ್ಯಾಕೆಟ್ಟುಗಳನ್ನು ಒಂದೊಂದಾಗಿ ಬಿಚ್ಚಿ ನೋಡಿದ ಬಚ್ಚಪ್ಪ

"ಇದ್ರಗ್ ಊಟ ಯಾವ್ದಪೋ?" ಎಂದು ಕೇಳಿದ.

ಅದೇ ಪ್ರಶ್ನೆಗೆ ಉತ್ತರ ಹುಡುಕುತ್ತಿದ್ದ ರಾಮಣ್ಣ "ಸುಮ್ಕ್ ಅಷ್ಟುನ್ನೂ ಒಂದುಂಡೆ ಮಾಡಿ ಬಾಯ್ಗಾಕ್ಕಳ್ಳ" ಎಂದ.

"ನಮ್ಮೂರ್ ಮಿಲ್ಟ್ರಿಓಟ್ಲು ಊಟುಕಿನ್ನ ಇವ್ರ್ ಕೊಟ್ಟಿರ ಔಸ್ದಿ ಬಲ್ ಪಸಂದಾಗದೆನೊ" ಎಂದು ಗೊಣಗಿಕೊಂಡು ಬಚ್ಚಪ್ಪ ಊಟದ ಶಾಸ್ತ್ರ ಮುಗಿಸಿದ.

ಸಿಂಗಾಪುರದಲ್ಲಿ ವಿಮಾನ ಬದಲಿಸಿದಾಗ ಯಾರ ನೆರವಿಲ್ಲದೆ ತಾನೇ ಬೆಲ್ಟು ಹಾಕಿಕೊಂಡ ಬಚ್ಚಪ್ಪ ವಿಮಾನ ಮೇಲೇರುತ್ತಿದ್ದಾಗ ಕಿಟಕಿಯಿಂದ ಒಪ್ಪವಾಗಿ ಜೋಡಿಸಿಟ್ಟ ಸಂಕ್ರಾಂತಿಯ ಸಕ್ಕರೆ ಅಚ್ಚುಗಳಂತೆ ಕಾಣುತ್ತಿದ್ದ ಸಿಂಗಾಪುರದ ಮುಗಿಲೆತ್ತರದ ಕಟ್ಟಡಗಳನ್ನು ನೋಡುತ್ತ ಈ ವಿಮಾನದಲ್ಲಾದರೂ ಒಂದಿಷ್ಟು ಟ್ರಿಬಲೆಕ್ಸ್ ಸಿಗಬಹುದೇ ಎಂದು ತುಟಿ ತೇವ ಮಾಡಿಕೊಂಡು ಕುಳಿತ.

ಅದೊಂದನ್ನು ಬಿಟ್ಟು ಪ್ರಪಂಚದ ಇನ್ನೆಲ್ಲ ಮದ್ಯಗಳನ್ನು ಹೊತ್ತಂತಿದ್ದ ಗಾಡಿ ಬಂದು ನಿಂತು ಅವನಾಸೆಯ ಮೇಲೆ ಮತ್ತೆ ತಣ್ಣೀರೆರಚಿ ಹೋಯಿತು.

ಇನ್ನೊಂದು ಸಪ್ಪೆರಡ್ಡು ಊಟ ಉಂಡು ಲೋಟದಲ್ಲಿದ್ದ ಕರಿ ಕಾಫಿಗೆ ಪುಟಾಣಿ ಪ್ಯಾಕೆಟ್ಟಿನಿಂದ ತಂಗಳು ಹಾಲು ಬೆರೆಸಿ ಕುಡಿದ ಬಚ್ಚಪ್ಪ ತಿಳಿಯದೆ ಡೆಟಾಲನ್ನು ನೆಕ್ಕಿರುವ ಬೆಕ್ಕಿನಂತೆ ಮುಖಮಾಡಿಕೊಂಡು ಟೀವಿಯಲ್ಲಿ ಬರುತ್ತಿದ್ದ ಇಂಗ್ಲಿಷ್ ಸಿನಿಮಾ ನೋಡುತ್ತಾ ತೂಕಡಿಸಿದ.

ಎಚ್ಚರಗೊಂಡಾಗ ಇಂಗ್ಲಿಷ್ ಸಿನಿಮಾದ ಗುಂಗಿನಿಂದಲೋ ಅಥವಾ ಪಾಶ್ಚಿಮಾತ್ಯರ ಪ್ಯಾಕೆಟ್ ನೀರು ಕುಡಿದಿದ್ದರಿಂದಲೋ ಏನೋ "ತಾಳೆಟ್ಗೋಬೇಕಪೋ.." ಎಂದ.

ಒಮ್ಮೆ ಹೋಗಿಬಂದು ಅನುಭವಿಯಾಗಿದ್ದ ರಾಮಣ್ಣ ಬಚ್ಚಪ್ಪನಿಗೆ ಮಾರ್ಗದರ್ಶನವಿತ್ತು,

"ನೀರಿನ್ ಗುಂಡಿ ಬುಟ್ ಬ್ಯಾರೆ ಯಾವ್ದನ ಒತ್ತ್‌ಗಿತ್ತೀಯ, ಇಮಾನ್ದಿಂದ್ ಆಚ್ಗಾಕ್ಬುಡ್ತೈತೆ" ಎಂದು ಎಚ್ಚರಿಸಿ ಕಳಿಸಿದ.

ಟಾಯ್ಲೆಟ್ಟಿನಿಂದ ಹೊರಬಂದಾಗ ಬಚ್ಚಪ್ಪನ ಕಣ್ಣುಗಳಲ್ಲಿ ಆಕಸ್ಮಿಕವಾಗಿ ಅಲಿಬಾಬಾನ ಗುಹೆಯೊಳಗಿನ ಅದ್ಭುತಗಳನ್ನು ಕಂಡುಹಿಡಿದ ಬೆರಗಿತ್ತು.

"ಎಲಾ ನನ್ಮಗುಂದೆ.!....ಗುಂಡಿ ಒತ್ದೇಟ್ಗೆ ಬಟ್ಲಗಿರದ್ನೆಲ್ಲ ಸೊಯ್ಕ್‌ಅಂತ ಒಳ್ಳೆ ಆನೆ ಕೆರೇಲ್ ನೀರೆಳ್ದಂಗ್ ಯಳ್ಕಬುಡ್ತದಲ್ಲಾ, ಇನ್ನೆಂತಾ ಮೆಕಾನಿಕ್ ಮಡ್ಗಿರ್ಬೋದು ಅದ್ರಗೆ!" ಎಂದು ಅರಳಿದ ಅವನ ಮುಖ ಮರುಕ್ಷಣವೇ ಅಲ್ಲಿಯ ಅತಿದೊಡ್ಡ ಕೊರತೆಯೊಂದನ್ನು ನೆನೆಸಿಕೊಂಡು ಸ್ವಲ್ಪ ಕುಂದಿತು.

"ಆದ್ರೆ ಈ ಪೇಪರ್ ಶಿಶ್ಟಮ್ಮು ಸಟ್ಟಾಯ್ಕಿಲ್ಲ ಬುಡಪ.." ಎಂದ.

"ಲೇ ಬಚ್ಚೆಗೌಡ, ಇನ್ನ್ ನಮ್ಮೂರ್ಗ್ ವಾಪಸ್ ಓಗಗಂಟ ಎಲ್ಲೂ ತೊಳ್‌ಗಿಳ್ಯೋ ಬಾಬತ್ತಿಲ್ಲ, ತಿಳ್ಕಬುಡು. ಎಲ್ಲೋದ್ರೂ ಬರೇ ಪೇಪರೇ ಗತಿ..."

"ಮುದ್ದುನ್ ಮನ್ಯಗೆ..?"

"ಅಲ್ಲೂವೆ.."

"ಯೇ..ಬೈಲ್ಗೋದ್ರಾಯ್ತು.."

"ಬೈಲ್ಗೋದ್ರ್ ಜೈಲ್ಗಾಕ್ತರೆ.!...ಆಮ್ಯಾಕ್ ಅಂಗೆಲ್ಲಾರ ಮಾಡಿ ಕುಲ್ಗೆಡ್ಸಿಕ್ಕೀಯಲೇ ತಿಕ್ಕುಲ್‌ಸುಬ್ಬ!"

ಬಚ್ಚಪ್ಪನ ಸಲಹೆಯನ್ನು ಮನಸ್ಸಿನಲ್ಲೇ ಚಿತ್ರಿಸಿಕೊಂಡ ರಾಮಣ್ಣ ಗಾಬರಿಯಾಗಿ ಗದರಿದ.

ಪಾಶ್ಚಿಮಾತ್ಯರ ಈ ಒಣ ಶೌಚಾಭ್ಯಾಸ ತನ್ನಿಂದ ತಿಂಗಳುಗಟ್ಟಲೆ ಸಾಧಿಸಲಾದೀತೇ ಎಂದು ಮಂಕಾಗಿ ಯೋಚಿಸುತ್ತ ಕಿಟಕಿಗೆ ತಲೆಯಿಟ್ಟ ಬಚ್ಚಪ್ಪ ಹೊಸೆದ

ಹತ್ತಿಯ ಮೆತ್ತನೆ ಹಾಸಿನಂತಿದ್ದ ಬಿಳಿಮೋಡವನ್ನು ನೋಡಿ ಜೋಂಪು ಹತ್ತಿ ಮತ್ತೆ ನಿದ್ದೆ ಹೋದ.

ಕನಸಿನಲ್ಲಿ ಮೋಹಿನಿ ಬಂದು ಅವನ ತಲೆಯನ್ನು ತನ್ನ ತೊಡೆಯಮೇಲಿಟ್ಟುಕೊಂಡು ನೇವರಿಸುತ್ತ ಕೆಂಪು ಹಲ್ಲುಗಳ ನಗೆ ಸೂಸಿ

"ಯಾಕಿಂಗ್ ಯೇಚ್ನೆ ಮಾಡೀ ಬುಡತ್ಲಗೆ....ಎಲ್ಲಾ ಸರೋಯ್ತದೆ" ಎಂದು ಸಮಾಧಾನ ಮಾಡುತ್ತಿದ್ದಳು.

ಸಣ್ಣಗೆ ತಿಣುಕುತ್ತ ಗಾಳಿಯನ್ನು ಗುದ್ದುತ್ತ ಕಾಲು ಝಾಡಿಸಿ ಧಡಕ್ಕನೆ ಎದ್ದು ಕುಳಿತ ಬಚ್ಚಪ್ಪ ಕೋರೆ ಒರೆಸಿಕೊಂಡು ಚೇತರಿಸಿಕೊಳ್ಳುವ ಹೊತ್ತಿಗೆ ವಿಮಾನ ಬಿಳಿಮೋಡದ ಹಾಸನ್ನು ಸೀಳಿಕೊಂಡು ರೆಕ್ಕೆಯಂಚುಗಳನ್ನು ಓರೆಮಾಡಿಕೊಂಡು ಆಕ್ಲೆಂಡಿನ ಹಚ್ಚ ಹಸಿರಿನ ಅಂಗಳಕ್ಕೆ ಇಳಿಜಾರು ಮಾಡಿಕೊಳ್ಳತೊಡಗಿತ್ತು.

Ramanna & Bachche Gowda (Part-3) ಪ್ಯಾಂಟು ಎದೆ ತಾವ್ ವಸಿ ಲೂಜು


ಅವಿರತವಾಗಿ ಹರಿಯುತ್ತಲೇಇದ್ದ ಹಲಸೂರು ಟ್ರಾಫಿಕ್ಕಿನ ನದಿಯನ್ನು ದಾಟಲು ಹವಣಿಸುತ್ತಿದ್ದ ಬಚ್ಚಪ್ಪ ಎರಡು ಮೂರು ಬಾರಿ ಅನುಮಾನಿಸುತ್ತಲೇ ಇಳಿದವನು ಬಸ್ಸು ಲಾರಿಗಳು ಯಾವ ಮುಲಾಜೂ ಇಲ್ಲದೆ ಅವನ ಮೈಮೇಲೇ ಬರುವಂತೆ ಕಂಡಾಗ ಹೆದರಿ ಮತ್ತೆ ಫುಟ್‍ಪಾತಿನ ದಡ ಸೇರಿಕೊಂಡಿದ್ದ.

"ಇದೇನ್ ಈ ಬೆಂಗ್ಳೂರಗಿರೋರೆಲ್ಲ ರೋಡ್‍ಮ್ಯಾಗೇ ಇದ್ದಂಗವ್ರಲ್ಲಪೋ! ಈಟೊಂದ್ ಗಾಡಿಗ್ಳು ಒಂದೇ ದೋ ಅಂತ ಅದೆಲ್ಗೊಂಟವೊ?""ಇವತ್ ಮುಂದ್ಕಾರು ಒಯ್ತಾ ಅವೆ ಕಣ್ಲೇ, ನಾನ್ ಓದ್ಸಲಿ ಬಂದಿದ್ದಾಗ್ ಯಾವ್ದೋ ಪಡ್ಡೆ ಉಡ್ಗುರ್ ಪಾರ್ಟಿ ಮೆರ್ವಣ್ಗೆ ಅಂತ ರೋಡ್ ಅಡ್ಡ ಆಕ್ಬುಟ್ಟೂ, ಎಲ್ಲ್ ನೋಡುದ್ರೂ ಎಣಕ್ ಸಾಮ್ರಾಣಿ ಬುಡೋವಂಗ್ ಒಗೆ ಬುಟ್ಕಂಡ್ ನಿಂತ್ಬುಟ್ಟಿದ್ವು ಗಾಡಿಗ್ಳು" ಎನ್ನುತ್ತ ರಾಮಣ್ಣ ಸಿಗ್ನಲ್ಲಿಗೆ ನಿಲ್ಲತೊಡಗಿದ್ದ ಟ್ರಾಫಿಕ್ಕಿನ ಮಧ್ಯೆ ದಾರಿ ಮಾಡಿಕೊಂಡು ರಸ್ತೆ ದಾಟತೊಡಗಿದ.

ಬಚ್ಚಪ್ಪ ಅವಸರವಸರವಾಗಿ ಹಿಂಬಾಲಿಸಿದ. ಅಷ್ಟರಲ್ಲಿ ಬಲಗಡೆಯಿಂದ ಯಾವನೋ ಕುಸೇಲನ್ ಶಿಷ್ಯ ಬೈಕನ್ನು ಸಂದು ಕಂಡಲ್ಲಿ ನುಸುಳಿಸುತ್ತ ವ್ರೂಂ ವ್ರೂಂ ಎನ್ನಿಸುತ್ತ ಅವನನ್ನು ಗುಮ್ಮುವಂತೆ ನುಗ್ಗಿದಾಗ ರೊಚ್ಚಿಗೆದ್ದ ಬಚ್ಚಪ್ಪ,

"ಯೈ ನಿಲ್ಸಲೇ ನಿಮ್ಮ್.., ಜಾಡ್ಸ್ ಒದ್ಬುಟ್ಟೇನು, ಎತ್ತುಚ್ಚೆ ಉಯ್ದಂಗ್ ನೀವ್ ಗಾಡಿಗ್ಳೋರ್ ಇಂಗ್ ಒಂದೇಸಮ ಬತ್ತಾನೇ ಇದ್ರೆ ಮನ್ಸ್ರು ಈಕಡೀಂದಾಕಡೀಕ್ ಓಗದ್ ಎಂಗಲೇ?" ಎನ್ನುತ್ತ ಅವನನ್ನು ಕೆಕ್ಕರಿಸಿ ನೋಡಿದ ಬಚ್ಚಪ್ಪ

ಹೆಗಲ ಮೇಲಿನ ಟವಲನ್ನು ಮಾತಿಗಿಂತ ಜೋರಾಗಿ ಒಮ್ಮೆ ಝಾಡಿಸಿದ.
ಎದುರುಬೊಗಳಲು ತಯಾರಾಗುತ್ತಿದ್ದ ಮರಿ ರಜನಿ ಬಚ್ಚಪ್ಪನ ಕೆಂಡಾವತಾರ ಕಂಡು ಗಲಿಬಿಲಿಗೊಂಡು ತನ್ನ ಕಪ್ಪು ಕನ್ನಡಕವನ್ನು ರೊಯ್ಯನೆ ತೆಗೆದು ಅದನ್ನೊಮ್ಮೆ ಮುನಿಸಿನಿಂದ ನೋಡಿ ಮತ್ತೆ ತೊಟ್ಟುಕೊಂಡ.

ಜನಸಂದಣಿಯಲ್ಲಿ ಕಣ್ಮರೆಯಾಗುತ್ತಿದ್ದ ರಾಮಣ್ಣನ ಹಳದಿ ಟವಲನ್ನು ಹಿಂಬಾಲಿಸುವ ತರಾತುರಿ ತೋರಿದ ಬಚ್ಚಪ್ಪ.

ಬಚ್ಚಪ್ಪ ರಾಮಣ್ಣನಿಗೆ ದೂರದ ಸಂಬಂಧಿಯಾದರೂ ಬಲು ಹತ್ತಿರದ ಬಂಟನಾಗಿದ್ದ. ರಾಮಣ್ಣನ ಯಾವುದೇ ಕಾರ್ಯ ಕೈಗೊಳ್ಳಲಿ, ಎಲ್ಲಿಗೇ ಪ್ರಯಾಣ ಬೆಳೆಸಲಿ ಹನುಮಂತನಂತೆ ಬಚ್ಚಪ್ಪ ಹಿಂದೆಯೇ ಇರುತ್ತಿದ್ದ.
ಇಬ್ಬರಿಗೂ ಮುಂಬರಲಿದ್ದ ವಿದೇಶ ಪ್ರವಾಸದ ಸಂಭ್ರಮ. ನ್ಯೂಜಿಲೆಂಡಿನಲ್ಲಿದ್ದ ರಾಮಣ್ಣನ ಭಾಮೈದ ಮುದ್ದುಕೃಷ್ಣ ಇವರನ್ನು ಅಲ್ಲಿಗೆ ಕರೆಸಲು ವೀಸಾದ ವ್ಯವಸ್ಠೆ ಮಾಡಿದ್ದ.
ಇವರಿಬ್ಬರ ಬಳಿ ಜಮೀನನ್ನು ಸೈಟುಗಳಾಗಿ ಮಾರಿ ಬಂದ ಬಂಡಿ ಹಣ ಇಂಥ ಹತ್ತಾರು ವಿದೇಶಿ ಪ್ರವಾಸ ಮಾಡಿದರೂ ಕರಗದಷ್ಟು ಕೊಳೆಯುತ್ತಿತ್ತು. ಹೋಗಲು ವಿಮಾನದ ಟಿಕೆಟ್ಟುಗಳನ್ನೂ ಕೊಂಡಾಗಿತ್ತು.
ವಿದೇಶಕ್ಕೆ ತಕ್ಕ ದಿರಿಸು ಹೊಲೆಸಿಕೊಳ್ಳಲು ಬೆಂಗಳೂರಿಗೆ ಬಂದು ಹಲಸೂರಿನಲ್ಲಿ ರಾಮಣ್ಣನಿಗೆ ಪರಿಚಯವಿದ್ದ ಟೈಲರ್ ಅಂಗಡಿಯನ್ನು ಅರಸಿ ಹೊರಟಿದ್ದರು.

ಬೆಂಗಳೂರಿನ ಟ್ರಾಫಿಕ್ಕಿನ ಬಿಸಿಗೆ ಬೆಂದ ಬಚ್ಚಪ್ಪ "ಈ ರಾಮಾಯ್ಣ ಬ್ಯಾಡ ಅಂತಾನೆ ನಾನ್ ಯೋಳಿದ್ದು ನಮ್ಮೂರ್ ರಾಮೋಜಿ ತಾವೇ ಒಲ್ಸ್ಬುಡಮ ಬಟ್ಟೆಯ ಅಂತ" ಎಂದು ಚಡಪಡಿಸಿದ, ಹೊಗೆಯ ಸಮುದ್ರದಲ್ಲಿ ಉಸಿರು ಹಿಡಿದು ಮುಳುಗಿ ತೇಲಿ ಒದ್ದಾಡಿ ಸಾಕಾಗಿ.

"ಅದೇ ನಿನ್ತಮ್ಮುನ್ ಮದಿವ್ಗ್ ಒಲ್ಸ್ಕಂಡಿದ್ಯಲ್ಲಪ ಪ್ಯಾಂಟು ಅವುಂತಾವ, ಒಳ್ಳೆ ನಮ್ಮ ದಾಕ್ಸಿ ತ್ವಾಟುದ್ ಬೆದುರ್ ಬೊಂಬೆಗ್ ಆಕಿರ ಪ್ಯಾಂಟಿದ್ದಂಗೈತದು.

ನೀನ್ ಅದ್ನಾಕ್ಕಂಡಿದ್ರೆ ಪ್ಯಾಂಟ್ ಆಕ್ಕಂಡಿದ್ಯೋ ಪಂಚೆ ಉಟ್ಗಂಡಿದ್ಯೋ ಅನ್ನದೇ ಗೊತ್ತಾಗಕಿಲ್ಲ" ಎಂದು ರಾಮೋಜಿಯ ದರ್ಜಿಕಲೆಯ ದಕ್ಷತೆಯನ್ನು ಉಪೇಕ್ಷಿಸಿದ ರಾಮಣ್ಣ.

"ನೀನ್ ಅವುನ್ಗೆ ಬಟ್ಟೆ ಯೇಷ್ಟ್ ಆಗ್ಬಾರ್ದು ಅಂತ ಗುರಾಯಿಸ್ದೆ, ಅವ್ನು ಇರದ್ನೆಲ್ಲ ಆಕಿ ಒಲುದ್ನಪ್ಪ" ಬಚ್ಚಪ್ಪ ರಾಮೋಜಿಯ ರಕ್ಷಣೆಗೆ ನಿಂತ.

"ಲೈ, ಬಟ್ಟೆ ಯೇಷ್ಟ್ ಮಾಡ್ಬ್ಯಾಡ ಅಂದ್ರೆ ಮಿಕ್ಕಿದ್ರಲ್ ಬ್ಯಾಗೋ ತಲ್ದಿಂಬೋ ಒಲ್ಕೊಡೂಂತ, ಇಲೀ ಸೈಜ್ ಪ್ಯಾಂಟ್ನ ಆನೆ ಸೈಜ್ಗ್ ಒಲಿ ಅಂತಲ್ಲ. ನಾನ್ ಬಡ್ಕಂಡೆ, ಅಷ್ಟ್ ಸಡ್ಲ ಒಲ್ಸ್ಬ್ಯಾಡ್ ಕಣ್ಲೆ ಅಂತ..."

"ಇಲ್ಲಾ.. ಆ ಜ್ಯೋತಿಲಕ್ಸ್ಮಿ ಆಕ್ಕಣ್ತಿದ್ಲಲ್ಲ ಅಂಗ್ ಒಲ್ಸ್ಕಮಣಪ...ಆಮ್ಯಾಕ್ ಅದ್ನ ಆಕ್ಕಣಕ್ ಒಂದಿನ ತಗ್ಯಕ್ ಒಂದಿನ..."

"ಲೇ ಬಚ್ಚೇಗೌಡ, ಆ ರಾಮೋಜಿ ನಿನ್ ಪ್ಯಾಂಟ್ ಒಲ್ದಿರೊ ಉಟ್ಟು ಸೊಂಟುದ್ ತಾವ್ ಕಟ್ಗಣೋ ಬೆಲ್ಟು ಎದೆ ತಾವ್ ಬಂದೈತಲ ಲೈ. ಅದ್ನಾಕ್ಕಂಡಿದ್ದಾಗ್ ನೀನೇನಾರ ಒಂದುಕ್ಕೋಬೇಕಾದ್ರೆ ಪಷ್ಟು ಸಲ್ಟು ಬಿಚ್ಚ್ಬೇಕಾಯ್ತದೆ ನೋಡಪ.."

"ಥೂ ನಂಗ್ ಇದ್ಕೇ ರೇಗದು. ಯಾವನಿಗ್ ಬೇಕಾಗಿತ್ತಪ ಈ ಪ್ಯಾಂಟ್ ಸಾವಾಸ? ನೀನ್ 'ಪ್ಯಾಟೆಗೋಗಕ್ ಒಂದಿರ್ಲಿ ಒಲ್ಸ್ಕಳಲೇ' ಅಂದೆ ಅಂತ್ ಒಲ್ಸ್ಕಂಡ್ರೆ ಇವಗ್ ಅದ್ನ್ ನೋಡ್ದಾಗೆಲ್ಲ ಒಳ್ಳೆ ಸೀಳ್ ನಾಯ್ ಊಳಿಟ್ಟಂಗೆ ನಗ್ತಿಯ. ಅದ್ಕೆ ಇದ್ರ್ ತಂಟೇನೇ ಬ್ಯಾಡ ಅಂತಿನಿ - ನೀಜ್‍ಲೆಂಡ್ಗೂ ಇಂಗೇ ಪಂಚೆ ಸಲ್ಟು ಆಕ್ಕಂಡೇ ಓಗ್ಬರಮ ನಡಿ ಏನಿವಗ?"

"ಅಲ್ಲ್ ಪಂಚೆ ಉಟ್ಗಂಡ್ ಓಡಾಡುದ್ರೆ ಸಳೀಗ್ ಜೀವ ಬತ್ತೋಯ್ತವಂತೆ ಕಣ್ಲೇ" ಬಚ್ಚಪ್ಪನ ಕಡೆ ಕೀಟಲೆಯ ಕಣ್ಣುಕುಣಿಸಿದ ರಾಮಣ್ಣ "ಇದ್ ಬ್ಯಾಸ್ಗೆ ಕಾಲ, ಅದ್ಯಾಕ್ ಸಳಿ ಆದಾತೂ?" ಬಚ್ಚಪ್ಪ ರಾಮಣ್ಣನಿಗೆ ತನ್ನ ತೀಕ್ಷ್ಣ ತರ್ಕಶಕ್ತಿಯ ಬಿಸಿ ತಟ್ಟಿಸಿದ.

"ಇಲ್ಲ್ ಬ್ಯಾಸ್ಗೆ ಇದ್ದಾಗ್ ಅಲ್ಲಿ ಸಳಿಗಾಲ್ವಂತೆ ಕಣ. ಇಲ್ಲಿ ಬೂಮಿ ಕಾವ್ಲಿ ಬೇಯಂಗಿದ್ದಾಗ್ ಅಲ್ಲಿ ಮಂಜ್ ಬೀಳ್ತದಂತೆ" ಎಂದು ವಿವರಿಸಿದ ರಾಮಣ್ಣ.

"ಯೇ, ನಂಗ್ ಗೊತ್ತಾಗಕಿಲ್ಲ ಅಂತ ಸುಮ್ಕ್ ಇಲ್ಲುದ್ದೆಲ್ಲಾ ಯೋಳ್ತ್ಯ. ನಮ್ಗ್ ಬ್ಯಾಸ್ಗೆ ಕೊಡೋ ಸೂರ್ಯ ಅದೆಂಗ್ಗ್ ಅವ್ರುಗ್ ಮಾತ್ರ ಸಳಿಗಾಲ ಕೊಟ್ಬುಟ್ಟಾನೂ?"

"ಲೈ, ಗೊತ್ತಿಲ್ಲುದ್ನ್ ಕೇಳ್ ತಿಳ್ಕಬೆಕು ಅಂತರೆ ದ್ವಡೋರು. ಇಸ್ಕೂಲ್ಗ್ ಚಕ್ಕರ್ ವಡಿದಲೆ ನ್ಯಟ್ಗೋಗ್ ಕಲ್ತಿದ್ರೆ ಒಂದೀಟ್ ತಿಳ್ಕಂಡಿರಿವೆ"

"ಔದೇಳು, ನಮ್ಮ್ ಐನೋರ್ ಉಡ್ಗ ದೊಡ್ಡೆಮ್ಮೆ ಪ್ಯಾಸ್ ಮಾಡ್ಕ ಬಂದಿಲ್ವೆ? ಎಕರೇಗ್ ಏಟ್ ಪಲ್ಲ ರಾಗಿ ಆದಾವ್ಲ ಅಂದ್ರೆ ಗೊತ್ತಿಲ್ಲಂತೆ ಮುಕ್ಕಣ್ಣಂಗೆ"

"ಲೇ ಬಡ್ಡೆತದೇ, ಬೂಮಿ ಮ್ಯಾಗಿನರ್ದ ಬ್ಯಾಸ್ಗೇಲ್ ಇದ್ರೆ ಕ್ಯಳ್ಗಿನರ್ದ ಸಳಿಗಾಲ್ದಲ್ಲಿರ್ತೈತೆ. ಇದು ನೇಮ. ನಾ ಯೋಳ್ತಿನಿ, ಅಮಿಕ್ಕಂಡ್ ಕೇಳ್ ತಿಳ್ಕ........ಅಂದಂಗೆ, ಇಮಾನ್ದಗ್ ಕುಂತಿದ್ದಾಗ ಇಂಗೇ ನಂಗೆಲ್ಲ ಗೊತ್ತೈತೆ ಅಂತ್ ಎಂಗಂದ್ರಂಗೆ ಆಡಂಗಿಲ್ಲ ಗೊತ್ತಾಯ್ತ? ಅಲ್ಲ್ ಯಾರ್ಗೂ ಕನ್ನಡ ಬರಕಿಲ್ಲ, ಬರಿ ಇಂಗ್ಲೀಸೆಯ. ಎನರ ಬೇಕಿದ್ರೆ ನನ್ನ ಕ್ಯೋಳು, ನಾನೇಳಿ ತರುಸ್ತಿನಿ"

"ನಿಂಗ್ ಇಂಗ್ಲೀಸ್ ಬತ್ತದ?""ಬರಕಿಲ್ಲ. ಆದ್ರೆ ಏನೇನ್ ಕೇಳ್ಬೇಕಾಯ್ತದೋ ಅವ್ಕೆಲ್ಲ ಚೀಟಿ ಬರ್ಸ್ ಮಡ್ಗಿವ್ನಿ. ನೀರ್ ಕ್ಯೋಳಕ್ಕೆ, ಟೀವೀ ಆಕಕ್ಕೆ, ಇತ್ತ್ಲ್ ಕಡೆ ಓಗದುಕ್ಕೆ, ಎಲ್ಲಾದ್ಕೂನೂ... "

"ಓ, ಅದ್ಕೂನೂ? ಔದೂ, ಆಟೋಂದ್ ಜನ ಆಕಾಸ್ದಾಗ್ ಇತ್ತ್ಲು ಕಡೆ ಓದ್ರೆ ಅದೆಲ್ಲ ಎಲ್ಲಿಗೋಯ್ತದೋ..."

"ಎಲ್ಲಾ ಒಂದ್ ಕಡೆ ಬ್ಯಾಗ್ನಗ್ ಮಡ್ಗಿರ್ತಾರಂತೆ ಕಣ್ಲ""ಸಿವಾ, ಆ ಬ್ಯಾಗೇನಾರ ಜಾರಿ ಕ್ಯಳುಕ್ ಬೀಳ್ಬೇಕ್ ನೋಡೂ.... ಸುಮ್ಕ್ ನಮ್ಮ್ ರೈಲ್ನೋರ್ ಬುಟ್ಟಂಗೆ ಅಲ್ಲಲ್ಲೆ ಬುಟ್ರಾಗಕುಲ್ವೆ?"

"ಲೈ, ಅವ್ರ್ ಯವಾರಕ್ ಅವ್ರ್ ಏನಾರ ಯವಸ್ತೆ ಮಾಡ್ಕಂಡಿರ್ತರೆ, ನಿಂಗ್ಯಾಕ್ಲ ಅದ್ರ್ ತಕ್ರಾಲು? ಸುಮ್ಕ್ ನಾನ್ಯೋಳ್ದಂಗ್ ನಡ್ಕಳದ್ ಕಲ್ತ್ಕ"
ಎನ್ನುತ್ತ ಬಚ್ಚಪ್ಪನ ನಿಷ್ಕಲ್ಮಷ ಮನಸ್ಸಿನಲ್ಲಿ ಉದ್ಭವಿಸಿದ್ದ ಕಲ್ಮಷದ ಪ್ರಶ್ನೆಗಳಿಂದ ದಣಿಯುತ್ತಿದ್ದ ರಾಮಣ್ಣ ಫುಟ್‍ಪಾತಿನ ಅಂಚಿಗಿದ್ದ ಬೀಡಾ ಅಂಗಡಿಯ ಕಡೆ ತಿರುಗಿ

"ಬೀಡ ಆಕಮಾ?" ಎಂದ"ಊಂ..ಗುಲ್ಕನ್ ಆಕ್ಸು"

"ಒಹೊಹೊ, ಮುಗಲ್ರ್ ದರ್ಬಾರಗ್ ಉಟ್ಟ್‍ಬೆಳ್ದ್ ನನ್ಮಗ ನೀನು, ಗುಲ್ಕನ್ ಇಲ್ದಿದ್ರ್ ಆಗಕಿಲ್ಲ ನೋಡು. ಸಿಗ್ರೇಟ್ ಸೇದೀಯಾ?"

"ತಕ ಸೇದವ""ಯಾವ್ದು?"

"ಇಲ್ಷಿಲ್ಟ್ರು.." ರಾಮಣ್ಣ ಅಂಗಡಿಯವನ ಕಡೆ ನೋಡಿದ.

"ಸಿಗರೇಟ್ ಎಂಥ ಕೊಡ್ಲಿ?" ಇನ್ನಷ್ಟು ಕಿವಿಗೊಟ್ಟು ಕೇಳಿದ ಬೆಳ್ತಂಗಡಿಯ ಅಂಗಡಿಯವ, ಬಚ್ಚಪ್ಪನ ಆಕ್ಸೆಂಟ್ ಅರ್ಥವಾಗದೆ

"ಯೇ, ಇಲ್ಷಿಲ್ಟ್ರಪೋ.." ಬಚ್ಚಪ್ಪ ಪ್ಯಾಕೆಟ್ಟನ್ನು ಮುಟ್ಟಿ ತೋರಿಸಿದ

"ಓ, ವಿಲ್ಸ್ ಫಿಲ್ಟ್ರಾ...ಹಿಹ್ಹಿ?" ಅಂಗಡಿಯವನು ಹಲ್ಲುಕಿರಿದ

"ಊಂಕಣ್ ತತ್ತಾರ್ಲೇ" ಬಚ್ಚಪ್ಪ ಸಿಡಿಮಿಡಿದ, ಅಂಗಡಿಯವನ ನಗೆ ತನ್ನ ಬಗ್ಗೆ ಎಂಬುದನ್ನು ಸೂಕ್ಷ್ಮವಾಗಿ ಗ್ರಹಿಸಿ.

ಇಬ್ಬರೂ ಸ್ಪೀಟ್ ಬೀಡ ಜಗಿಯುತ್ತ ಇಲ್ಷಿಲ್ಟರಿನ ಹೊಗೆ ಹೀರುತ್ತ ಸೊಂಟದ ಬೆಲ್ಟು ಎದೆಯ ಮಟ್ಟಕ್ಕೆ ಬರದಂತೆ ಪ್ಯಾಂಟೂ, ಜೇಬು ಮಂಡಿಯ ಮಟ್ಟಕ್ಕೆ ಬರದಂತೆ ಕೋಟೂ ಹೊಲೆಯಬಲ್ಲ ಅಪರೂಪದ ಕಲೆಯುಳ್ಳ ಹಲಸೂರಿನ ಕೃಷ್ಣೋಜಿ ಟೈಲರ್ ಅಂಗಡಿಯನ್ನು ಹುಡುಕಿಕೊಂಡು ಹೊರಟರು.


Ramanna & Bachche Gowda (Part-2) ವೀಸಾ ಕೇಳಿದಿವಿ, ಗೂಸಾ ಕೇಳಿದಿವೀ, ಯಾವುದಿದು ಸೀಸಾ?


ಸೀಸ ಅಲ್ಕಣ್ ಪೆಕ್ರೇ, ಈಸ ಅಂತ, ಆ ದೆಸುಕ್ ಓಗಕ್ಕೆ ಪರ್ಮಿಟ್ ಇದ್ದಂಗೆ ಅದು. ಮೂರೊತ್ತೂ ಸೀಸ ರಡಿ ಮಾಡದ್ರಗಿರ್ತ್ಯ ನೋಡು ನೀನು.

ಗುಳುವನಹಳ್ಳಿಯಾರ ಹಾದು ಹೋಗುವ ಬಸ್ ರಸ್ತೆಯ ಅಂಚಿಗೇ ಇತ್ತು ಬಚ್ಚಪ್ಪನ ಜಮೀನು. ಅದರಲ್ಲಿ ಒಂದು ಭಾಗವನ್ನು ಯಾರೋ ಬೆಂಗಳೂರಿನವರು ಸೈಟು ಮಾಡಲು ಮುವತ್ತು ಲಕ್ಷಕ್ಕೆ ಕೇಳಿರುವ ವಿಷಯವನ್ನು ತನ್ನ ದೂರದ ದಾಯಾದಿ ರಾಮಣ್ಣನಿಗೆ ಬೆರಗಿನ ಭಾವದಲ್ಲಿ ವಿವರಿಸುತ್ತಾ ಮುಂದೆ ನಡೆಯುತ್ತಿದ್ದ ಬಚ್ಚಪ್ಪ.

"ಬಲೇ ಅರ್ಜೆಂಟಾಗವ್ನೆ ಕಣಪೋ ಆ ರೀಲೆಷ್ಟೇಟ್ ದಲಾಳಿ. 'ಬಚ್ಚಪ್ಪಾ, ನೀನ್ ಊಂ ಅಂದ್ರೆ ನಾಳೆನೆ ಕ್ಯಾಸ್ ರಡಿ' ಅಂತನೆ" ಎನ್ನುತ್ತ ರಾಮಣ್ಣನ ಕಡೆ ನೋಡಿದ.

"ಈ ಕೊಂಪೇಲ್ ಸೈಟ್ ತಗಣಕ್ಕೆ ಯಾವನ್ ಬತ್ತನಂತ್ಲ? ಇಲ್ಲಿಂದ್ ಬೆಂಗ್ಳೂರ್ ಅಂಚ್ಗೋಗಕ್ಕೇ ಒಂದ್ ಗಂಟೆ ಆಯ್ತದೆ, ಸಿಟೀಗ್ ಓಗದಿರ್ಲಿ" ಎಂದ ರಾಮಣ್ಣ.

"ನಾನೂ ಅಂಗೇ ಅಂದೆ. ಆದ್ರೆ ಆ ದಲಾಳಿ ಅಂತನೆ ಬೆಂಗ್ಳೂರೋರು ಜಾಗಕ್ಕೆ ಎಷ್ಟು ಬರಗೆಟ್ಟೋಗವ್ರೆ ಅಂದ್ರೆ, ಮೊನ್ನೆ ಅವ್ನು ಮನೆ ಮುಂದೆ ತುಳ್ಸಿ ಕಟ್ಟೆ ಕಟ್ಟವಾಂತ ಒಂದೈದ್ ಅಡಿಯಷ್ಟು ನೆಲ ಕಿಲೀನು ಮಾಡುಸ್ತಾ ಇದ್ರೆ ಓಗೋಬರೋರೆಲ್ಲಾ 'ಓ, ಏನು ಸೈಟ್ ಮಾಡ್ತೀರಾ? ಏನು ರೇಟು?' ಅಂತ ಕೇಳವ್ರಂತೆ ! ಇನ್ನೇನೇಳವ?" ಎಂದು ಅಚ್ಚರಿಯ ಕೈಚೆಲ್ಲಿದ ಬಚ್ಚಪ್ಪ.

"ಯಾವನೋ ಗಿಲೀಟ್ ನನ್ಮಗ ಇದ್ದಂಗವ್ನೆ. ಸೈನ್ ಮಾಡಕ್ ಮುಂಚೆ ಉಸಾರು, ಆಮ್ಯಾಕ್ಕೆ ಎಲ್ಲಾ ಕ್ಯಾಸ್ ಯವಾರ ಅಂದ್ಬುಟ್ಟು ಒಂದ್ ಮೂಟೆ ಕೊಯ್ಮತ್ತೂರು ನೋಟುಗ್ಳು ಕೊಟ್ಟೋಗ್ಬುಟ್ಟಾನು !" ಎಂದು ರಾಮಣ್ಣ ಲಘುವಾಗಿ ಎಚ್ಚರಿಸುತ್ತಿದ್ದಂತೆ ಬಚ್ಚಪ್ಪನ ಮೊಬೈಲ್ ಫ಼ೋನು ಸದ್ದು ಮಾಡತೊಡಗಿತು.

ಮೊಬೈಲ್ ಫೋನುಗಳ ಮೆರಗಿನ ಮರ್ಮಗಳನ್ನು ಇನ್ನೂ ಪೂರ್ತಿಯಾಗಿ ಅರಗಿಸಿಕೊಂಡಿರದ ಬಚ್ಚಪ್ಪ ಗಲಿಬಿಲಿಗೊಂಡು ತನ್ನ ಎಲ್ಲ ಜೇಬುಗಳನ್ನೂ ಸರಸರನೆ ತಡಕಾಡಿ ಅವನ ಮಾಸಲು ಚಡ್ಡಿಗೆ ತಕ್ಕ ವಿಪರ್ಯಾಸದಂತೆ ಲಕಲಕಿಸುತ್ತಿದ್ದ, ಅವನ ಸಾಮಾಜಿಕ ಅಸ್ತಿತ್ವಕ್ಕೂ ಸಾಂಸ್ಕೃತಿಕ ಹಿನ್ನೆಲೆಗೂ ತದ್ವಿರುದ್ದ ಪ್ರತೀಕದಂತಿದ್ದ ಒಂದು ಬೆಳ್ಳಿಯ ಮೊಬೈಲ್ ಫೋನನ್ನು ಹೊರ ತೆಗೆದ.

ಸತತವಾಗಿ ಸದ್ದು ಮಾಡುತ್ತಲೇ ಇದ್ದ ಅದನ್ನು "ಯೇ, ವಸಿ ಇರಂಗೆ !" ಎಂದು ಗದರಿಸುತ್ತ ಎಲ್ಲ ಗುಂಡಿಗಳನ್ನು ಒಂದೊಂದಾಗಿ ಒತ್ತಿ ನೋಡಿದ.

ಸದ್ದು ನಿಂತಾಗ ಕಿವಿಯ ಬಳಿ ಹಿಡಿದು "ಅಲೋ ಯಾರು?" ಎಂದ.

ಅವನ ಪೇಚು ನೋಡುತ್ತಿದ್ದ ರಾಮಣ್ಣ ಮುಂದೆ ಬಂದು ತಲೆಕೆಳಗಾಗಿ ಹಿಡಿದಿದ್ದ ಅವನ ಫೋನನ್ನು ಸರಿಪಡಿಸಿದ ಮೇಲೆ ಬಚ್ಚಪ್ಪ

"ಊಂ ಏನವ್ವ? ಊಂ..ಸರಿ...ಊಂ...ಯೋಳ್ತಿನೇಳು" ಎನ್ನುತ್ತ ಫೋನು ಮಗುಚಿದ.

"ಲೈ, ಕೆಂಬೂತ ನಾನ್ ನವಿಲು ಅನ್ಕಂಡ್ ಕುಣಿಯಕ್ಕೋದ್ರೆ ಇಂಗೇಯ ಆಗದು. ನೀನ್ ಯಾವ್ ಸೀಮೆ ಹಾಜಿ ಮಸ್ತಾನು ಅಂತ ಇಂಥಾ ಅಬ್ಬರದ್ ಫೋನ್ ತಗಂಡಲೇ, ನ್ಯಟ್ಗೆ ಕಿವಿ ತಾವ್ ಇಟ್ಗಣಕೂ ಬರ್ದು?" ಎಂದು ಗದರಿದ ರಾಮಣ್ಣ.

"ಯೇ ನೀನೊಳ್ಳೆ... ನಾ ಯಾಕ್ ತಗಳಕೋಗ್ಲಿ, ನಮ್ಮ್ ಉಡ್ಗ ವಸಾದ್ ತಗಂಡು ಅಳೇದ್ ನಂಗ್ ಕೊಟ್ಟವ್ನೆ ಅಷ್ಟೇಯ" ಎಂದು ಸಮಜಾಯಿಷಿ ಕೊಟ್ಟ ಬಚ್ಚಪ್ಪ.

"ಓಲಿ ಯಾರಿವಗ್ ಪೋನು ಮಾಡಿದ್ದು?" "ನೀಜಿಲೆಂಡಿಂದ ಮುದ್ದ ನಿಮ್ಮನೆಗ್ ಪೋನ್ ಮಾಡಿದ್ನಂತೆ, ಅದ್ನೇಳಕ್ಕೆ ಇವಗ್ ನಿಮ್ಮ್ ಪುಟ್ಟಿ ಇಲ್ಲಿಗ್ ಮಾಡುದ್ಲು"

"ಓ? ಏನಂದ್ನಂತೆ?" "ಅದೇ ನಮ್ಮ್ ಪಾಸ್‌ಪೋಲ್ಟು ರಡಿ ಆಯ್ತ ಅಂತ ಕ್ಯೋಳಕ್ಕೆ.

ನಮ್ಮ್ ಸೀಸ ರಡಿ ಮಾಡ್ಸ್ತಾವ್ನಂತೆ, ಅದ್ಕೆ" "ಸೀಸ ಅಲ್ಕಣ್ ಪೆಕ್ರೇ, ಈಸ ಅಂತ, ಆ ದೆಸುಕ್ ಓಗಕ್ಕೆ ಪರ್ಮಿಟ್ ಇದ್ದಂಗೆ ಅದು. ಮೂರೊತ್ತೂ ಸೀಸ ರಡಿ ಮಾಡದ್ರಗಿರ್ತ್ಯ ನೋಡು ನೀನು" ಎಂದು ಬಚ್ಚಪ್ಪನನ್ನು ಗೇಲಿ ಮಾಡಿದ ರಾಮಣ್ಣ.

"ಯೇ, ಮುಟ್ಟಿ ತಿಂಗ್ಳಾಯ್ತು. ಆ ಸಿಡ್ಲ ಕೊಟ್ಟಿದ್ದ್ ಟ್ರಿಬಲೆಕ್ಸು ಒಂದೀಟು ಬಗ್ಗ್ಸ್‌ಕಣವ ಅಂದ್ರೆ ಟೇಮೇ ಸಟ್ಟಾಯ್ತಿಲ್ಲ ಅಂತೀನಿ. ಈ ಜಮೀನ್ ಮಾರೋ ಗಲಾಟೇಲಿ ಬಿಡುವಿಲ್ಲುದ್ ನೀರಾವರಿ ಮಿನಿಶ್ಟ್ರು ಇದ್ದಂಗ್ ಆಗ್ಬುಟ್ಟಿವ್ನಿ.

ಅಂದಂಗೆ ಮೊನ್ನೆ ಮುದ್ದ ಏನೋ ಅಲ್ಲಿನ್ ಮಿನಿಶ್ಟ್ರ್ ಜೊತೆ ಪಟ ತಗುಸ್ಕಂಡವ್ನೆ ಅಂತಿದ್ದೆ?"

"ಊಂ. ಅಲ್ಲಿನ್ ಪ್ರೇಮ್ ಮಿನಿಶ್ಟ್ರು ಯಾವ್ದೋ ಸೆನಿವಾರುದ್ ಸಂತೇಲಿ ಎಲ್ಲಾರ್ಗೂ ನಮ್ಸ್ಕಾರ ಮಾಡ್ಗ್ಯಂಡು ಓಡಾಡ್ತಾ ಇದ್ಲಂತೆ, ಇವ್ನೂ ನಮ್ಸ್ಕಾರ ಮಾಡಿ ಪಕ್ಕ್ದಾಗ್ ನಿಂತ್ಗಂಡು ಪಟ ತಗುಸ್ಕಂಡ್ ಬಂದ್ನಂತೆ"

"ಯಂಗಂದ್ರಂಗೆ ಓಗಿ ಪಟ ತಗುಸ್ಕಣಕ್ ಬುಟ್ಟಾರ? ಸುತ್ತ ಪೋಲೀಸ್ನೋರು ಇರಕುಲ್ವೆ?"

"ಅಲ್ಲಿ ಅವೆಲ್ಲ ಏನೂ ಇಲ್ವಂತೆ ಕಣ. ಅಲ್ಲಿನ್ ಜನ ಮಿನಿಶ್ಟ್ರು ಅವ್ರ್ ಕಡೀಕ್ ಬರದ್ ಕಾಣ್ಸುದ್ರೆ ಪಿರ್ರೆ ತಿರುವ್ಗ್ಯಂಡು ಇನ್ನೊಂದ್ ದಿಕ್ಕಿಗ್ ಒಂಟೋಯ್ತರಂತೆ. ನಮ್ಮ್ ದೇಸ್ದಿಂದ ಓಗಿರೋರೇನಂತೆ ಅವ್ರ್ ಇಂದಿಂದೆ ತಿರ್ಗಾಡ್ಕ್ಯಂಡು ಅವ್ರ್ಗ್ ಒಂದೀಟು ಮರ್ವಾದೆ ಕೊಡದು"

"ವಾ..?" "ಮಿನಿಶ್ಟ್ರುಗ್ಳು ಸಣ್ಣಪುಟ್ಟ ಡಾನ್ಸು ಡ್ರಾಮಾಗೆಲ್ಲಾ ಬಂದೋಯ್ತರೆ, ನಮ್ಮನೆಗ್ ಊಟುಕ್ ಕರುದ್ರೆ ಬಂದ್ರೂ ಏನು ದೊಡ್ಡ್ ಇಸ್ಯ ಅಲ್ಲ ಅಂದ್ನಪ್ಪ ಮುದ್ದ"

"ಉಂಟಾ? ನೀನ್ ಬಾಡ್ಸಾರು ಮಾಡ್ಸಾಕಿ ಸೋನ್ಯಾ ಗಾಂದೀನ ಕರುಸ್‌ಬುಡಪ್ಪ ನೋಡವ?"

"ಲೈ, ನಮ್ಮ್ ತಾಲೂಕ್ ಆಪೀಸರ್ ಪಿ.ಎ. ನ ಕರುದ್ರೆ ಮೂಗು ಆಕಾಸಕ್ಕೆತ್ತಿ ದಿಮಾಕು ಮಾಡ್ತನೆ, ಡೆಲ್ಲೀಗ್ ಓದೆ ಸದ್ಯ.

ಆ ಸೋನ್ಯಾ ಗಾಂದಿ ಮೇಲ್ ಯಾಕ್ಲ ಕಣ್ಣು ನಿಂಗೆ, ಅವ್ಳೇನು ನಮ್ಮ್ ದೇಸುದ್ ಪ್ರೇಮ್ ಮಿನಿಷ್ಟ್ರೇ?"

"ಆಗಿದ್ರೆ ಸಂದಾಗೇ ಇರದಪ್ಪ. ನಾವೂ ಎಲ್ಲಾರ್ ತಾವ ನೋಡ್ರಲ ನಮ್ಮ್ ಪ್ರೇಮ್ ಮಿನಿಷ್ಟ್ರು ಎಂಗೆ ಬ್ಯಳ್ಗೆ ಒಳ್ಳೆ ಸಿನಿಮಾ ಆಗುಟ್ರು ಇದ್ದಂಗೆ ಅವ್ಳೆ ಅಂತ ಯೋಳ್ಕಂಡು ತಿರುಗ್ಬೋದಾಗಿತ್ತು"

"ಥೂ ನಿನ್....ಬೆಳ್ಳಗಿರೋರ್ ಕಂಡ್ರೆ ಸಾಕು ಅಂಗೆ ಕಡ್ಡಿ ಕರ್ಪೂರ ಇಡ್ಕಂಡು ಪೂಜೆಗ್ ರಡಿ ಆಯ್ತ್ಯಲ್ಲ ಲೈ.

ನಿಂದೇನ್ ತಪ್ಪಿಲ್ಲ ಬುಡು, ಇನ್ನೂರ್ ಒರ್ಸ ಆ ಬ್ರಿಟಿಸ್‌ನೋರು ಎಲ್ಲಾರ್ಗೂ ಅರ್ದು, ಕಾಯ್ಸಿ, ಸೋದ್ಸಿ ಕುಡುಸ್ಬುಟ್ಟ್ ಓಗವ್ರೆ, ಇಷ್ಟ್ ಬೇಗ ಎಲ್ಲ್ ಇಳ್ದಾತು ಅದ್ರ್ ನಸ.

ನಿನ್ನ್ ನೀಜಿಲೆಂಡ್ಗ್ ಕರ್ಕಂಡೋದ್ರೆ ಬೀದೀಲ್ ಕಂಡೋರ್ಗೆಲ್ಲ ಅಡ್ಡ್‌ಬೀಳಕ್ಕೋಗಿ ನಮ್ಮ್ ಮುದ್ದನ್ ಮರ್ವಾದೆ ಕಳೀತಿಯ ಆಟೇಯ"

"ಯೇ, ಸುಮ್ಕೆ ತಮಾಸಿಗ್ ಅಂಗಂದ್ರೆ ನೀನ್ ಒಂದೇ ಏಟ್ಗೆ ನಮ್ಮ್ ಇರೀಕುರ್ ತಾವ್ಕೆ ಓಯ್ತ್ಯಲ್ಲಪ್ಪೋ.

ಮನೇಗಿರ ನಸ ಸುದಾರ್ಸುದ್ರೆ ಸಾಕಾಗ್ಯದೆ ಸದ್ಯ ಬ್ಯಾರೆ ಅಚ್ಗಣಕ್ಕೋಗು ನೀನು "

"ಅದಂಗೇ ಕಣ್ಲ, ಒಟ್ಟ್ ತುಂಬ ರಾಗಿಮುದ್ದೆ ಇದ್ರೂ ಅನ್ನ ಕಂಡೇಟ್ಗೆ ಕಣ್ಣ್ ಅರ್ಳ್ತವಂತೆ. ಈ ನಸದ್ ಕತೆ ಅಂಗಿರ್ಲಿ, ಆ ಸಿಡ್ಲ ಕೊಟ್ಟಿದ್ ಸೀಸ ಮುಗ್ಸಕ್ ಟೇಮೇ ಆಗಿಲ್ಲ ಅಂದಲ್ವ ನೀನು?"

"ಊನಪ್ಪೋ" "ನಡಿ ಇವಗ್ ಟೇಮ್ ಕೊಡ್ತಿನಿ, ಮಗ್ಚಾಕವ ಅತ್ಲಗೆ" ಎಂದ ರಾಮಣ್ಣ.

ಇಬ್ಬರೂ ಹೊಸ ಬಿರುಸಿನಿಂದ ತೋಟದ ಮನೆಯ ಕಡೆ ಹೆಜ್ಜೆ ಹಾಕಿದರು

Ramanna & Bachche Gowda (Part-1) ನಮ್ಮ್ ಮುದ್ದುನ್ ಎಸ್ರು ಮಣ್ಣ್ ಮಾಡವ್ರಂತೆ ಕಣ್ಲ


ಒಂದಪಾ ಫಾರಿನ್ಗೆ ಹೋಗ್ಬೇಕು ಕಣ್ಲಾ, ಅದೆಂಗಿರ್ ತೈತೆ ನೋಡ್ಬೇಕು ಕಣ್ಲಾ, ನಮ್ ಹುಡುಗ್ರು ಅಲ್ಲಿ ಎಂಗದರೋ, ಏನೋ.. ಎಂಬೋದು ಬಸ್ಯನ, ರುದ್ರನ, ಚಂದ್ರನ, ಕರಿಯನ ಆಸೆ. ಹೋಗ್ ಬರೋದ್ ಹೆಂಗಂತ ನಿಂಗೇನಾರ ಗೊತ್ತೇನಣ್ಣ ? ಅಂಗೆ ವಸಿ ಹೇಳ್ಬಾರ್ದಾ.



"ಯಾರ್ದಪ ಪೋನು ಈಟೊತ್ನಗೆ?" ಬಚ್ಚಪ್ಪ ಅಂಗಳಕ್ಕೆ ಬಂದು ಜಗಲಿಯ ಮೇಲಿದ್ದ ಎಲೆಅಡಿಕೆಯ ತಟ್ಟೆಗೆ ಕೈಹಾಕುತ್ತಾ ಕೇಳಿದ.



ದೂರದ ಸಂಬಂದಿ ರಾಮಣ್ಣನ ಮನೆಯ ಖಾರದೂಟದ ಆಸ್ಪೋಟದಿಂದ ಇನ್ನೂ ಹೊಗೆಯಾಡುತ್ತಿದ್ದ ಬಾಯಿಗೆ ಒಂದು ಚಿಟಿಕೆ ಸಕ್ಕರೆ ಹಾಕಿಕೊಂಡು ಪಕ್ಕದಲ್ಲಿ ಬಂದು ಕೂತ.



"ಅದೇ ನನ್ನ್ ಬಾಮೈದ ಮುದ್ದ ಅವ್ನಲ್ಲೊ, ಅವುಂದು" ರಾಮಣ್ಣ ದಿಂಬನ್ನು ತಟ್ಟಿ ಸರಿಮಾಡಿಕೊಂಡು ಒರಗುತ್ತ "ತಿಂಗ್ಳದ್ನೈದ್ ದಿವ್ಸುಕ್ ಒಂದ್ಸಲ ಪೋನ್ ಮಾಡ್ತಾನೇ ಇರ್ತನೆ" ಅಂದ.



"ಓ ಗೊತ್ತ್ ಬುಡು, ಅದೇ ಡೆಲ್ಲಿನಗೋ ಪಾರಿನ್ನಗೋ ಅವ್ನಲ್ಲ?" ಬಚ್ಚಪ್ಪ ವೀಳ್ಯದೆಲೆಯ ತೊಟ ಮುರಿದು ಸ್ವಲ್ಪ ಸುಣ್ಣ ಸವರಿ ದವಡೆಗೆ ತುರುಕಿದ.



"ಲೈ, ಸೊಪ್ಪಿನ್ ಸಂತೇಲ್ ಸೀಮೆ‌ಅಸದ್ ಯವಾರ ಕೇಳ್ದಂಗ್ ಕೇಳ್ತ್ಯ ನೀನು. ಡೆಲ್ಲಿನೂ ಪಾರಿನ್ನೂ ಒಂದೇ ಏನ್ಲ? ಯಾವನಾರ ನೀನ್ಕೇಳದ್ ನೋಡುದ್ರೆ ನಮ್ಮ್ ಮುದ್ದ ಇಲ್ಲೇ ನಿಮ್ಮ್ ಗುಳುವ್ನಳ್ಳಿ ತಾವ್ ಜಲ್ಲಿ ಕಂತ್ರಾಟು ಮಾಡುಸ್ತಾವ್ನೇನೋ ಅನ್ಕಂಬೇಕ್ ನೋಡು. ಡೆಲ್ಲಿ ಇರದು ನಮ್ಮ್ ದೇಸ್ದಗೆ, ಇವ್ನಿರೋ ಪಾರಿನ್ನು ಇಲ್ಲ್ಗ್ ಅತ್ಸಾವ್ರ ಮೈಲಿ ಆಯ್ತದೆ, ಗೊತ್ತೇನ್ಲೇ"

ಅನ್ನುತ್ತ ಭಾಮೈದುನನಿಂದ ಪಡೆದಿದ್ದ ದೂರದ ಹೊಸ ಮಾಹಿತಿಯನ್ನು ಬಚ್ಚಪ್ಪನ ಮೇಲೆ ಎಸಗಿದ ರಾಮಣ್ಣ.



"ಅಂಗಾರೆ ಶಾನೆ ದೂರ ಅನ್ನು"

"ಎಲ್ಡು ದಿನ ಓಗ್ಬೇಕ್ ಕಣ್ಲೇ, ಪಯಾಣ""ಹಡುಗ್ನಗೆ?" ಎಂದ ಬಚ್ಚಪ್ಪ, ತನ್ನೂರಿಂದ ನೂರು ಮೈಲಿ ಆಚೆಯೂ ನೋಡಿರದ ಸಹಜ ಮುಗ್ಧತೆಯಿಂದ, ಹತ್ತುಸಾವಿರ ಮೈಲಿಯ ಅಂದಾಜು ಸಿಗದೆ ತಡಕಾಡುತ್ತ.



"ಇಲ್ಲ ಎತ್ತಿನ್‍ಗಾಡಿಯಗೆ ! ಲೈ, ಹಡುಗ್ನಗೋಗಕ್ಕೋದ್ರೆ ಮುದುಕ್ನಾಗೋಗಿರ್ತ್ಯ ಓಗೋವತ್ಗೆ. ಇಮಾನ್ದಗೆ ಕಣ್ಲ"



"ಓಲಿ ಏನಂತಪ್ಪ ಸೆಮಾಸಾರ, ಯಾವಗ್ ಬತ್ತನಂತೆ? ಬರೋ ತಿಂಗ್ಳು ನಿಮ್ಮೂರ್ ಜಾತ್ರೆ ಟೇಮ್ಗೆ ಬಂದೋಗು ಅಂದಿದ್ರೆ?"



"ಊಂ, ತಿಗೀಟು ಕಳುಸ್ತ್ಯಾ? ಮುವ್ವರಿಂದ ಎಲ್ಡ್ ಲಕ್ಸಾಯ್ತದಂತೆ" ಅನ್ನುತ್ತಾ ಬಚ್ಚಪ್ಪನ ಕಡೆ ಗೇಲಿಯ ಹುಬ್ಬು ಕುಣಿಸಿದ ರಾಮಣ್ಣ.



"ವಾ, ಒಂದ್ಸಲಿ ಬಂದೋದ್ರೆ ಒಂದೆಕ್ರೆ ತ್ವಾಟ ಗದ್ದೆ ಮಾರ್ದಂಗೆ ಅನ್ನು ಲೆಕ್ಕಾಸ್ಯಾರ. ಯೇನ್ ಅವ್ನಿರೋ ಊರೆಸ್ರು?"



"ಅದ್ರೆಸ್ರೇ ಬಾಯಿ ತಿರ್ಗಲ್ಲ ಕಣ, ಅದೆಂತದೋ ನೀಜಿಲೆಂಡಂತೆ. ಲಂಡನ್ನು ಅಮೇರಿಕ ಇದ್ದಂಗೆ ಅದೂನೂ ಒಂತರಾ ಮುಂದ್ವರ್ದಿರೋ ದೇಸನಂತೆ"



"ಓ? ಏನಕ್ ಎಸ್ರುವಾಸಿನಂತೆ?" ಎಲೆಅಡಿಕೆಯ ರಸ ಸೋರದಂತೆ ತುಟಿ ಮುಂದು ಮಾಡಿಟ್ಟುಕೊಂಡು ಕೇಳಿದ ಬಚ್ಚಪ್ಪ.



"ಕುರಿಗಳ್ಗೆ""ಯೇ..ನೀನೂ ಸರಿ"



"ಊಂ ಕಣ್ಲ, ಆ ದೇಸ್ದೋರ್ ಆದಾಯ ಏನಿದ್ರೂ ಕುರಿ ಸಾಕದು, ಅಸೀನ್ ಆಲು ಬೆಣ್ಣೆ ಯಾಪಾರ, ಇಂತದ್ರಗೇನಂತೆ""ಸರೋಯ್ತು ಬುಡು.



"ಆ ಮೇನತ್ತು ನೋಡಕ್ ಅತ್ಸಾವ್ರ ಮೈಲಿ ಓಬ್ಯಾಕಿತ್ತ ನಮ್ಮ್ ಮುದ್ದ, ನಮ್ಮೂರಗಿರುಲ್ವೆ?" ಅನ್ನುತ್ತ ಬಚ್ಚಪ್ಪ ಬಾಯಲ್ಲಿದ್ದ ಕೆಂಪು ರಸವನ್ನು ದೂರಕ್ಕೆ ಉಗಿದು



"ಓಲಿ ಎಲ್ಲಾರು ಸಂದಾಕವ್ರಂತ?" ಎಂದು ಕೇಳಿದ.



"ಅದ್ಯಾವೂರ್ ಚಂದ್ವೋ ತಗಿ" ರಾಮಣ್ಣ ಸ್ವಲ್ಪ ಅಸಮಾಧಾನವಾಗಿಯೇ ಅಂದ, "ಪೋನ್ ಮಾಡ್ದಗೆಲ್ಲ ಎನ್ಮಾಡೀಯೋ ಮುದ್ದಾ ಅಂದ್ರೆ ಇಲ್ಲಾ ಪಾತ್ರೆ ತೊಳಿತಿವ್ನಿ ಅಂತನೆ, ಇಲ್ಲಾ ಕಸ ಗುಡುಸ್ತಿವ್ನಿ ಅಂತನೆ, ಇಲ್ಲಾ ಅನ್ನಕ್ಕಿಡ್ತಿವ್ನಿ ಅಂತನೆ"



"ಅಯ್, ಯಾಕ್ ಕೆಲ್ಸ್ದೋರ್ನ್ ಮಡಿಕಂಡಿಲ್ವೆ?""ಕೆಲ್ಸ್ದೋರ್ ಮಡಿಕಂಡ್ರೆ ಇವುನ್ಗೆ ಬರೋ ಸಂಬ್ಳ ಪೂರ್ತ ತಗ್ದು ಅವ್ರಿಗ್ ಕೊಡ್ಬೇಕಾಯ್ತದಂತೆ"ಬಚ್ಚಪ್ಪ ಬೆಚ್ಚಿಬಿದ್ದ.



"ಅಯ್ಯೊವ್ರ್‌ಮನ್ಕಾಯೋಗ ! ಇಂಜ್ನೇರ್ಗುಳ್ಗೂ ಮನೆ ಕೆಲ್ಸ್ದೋರ್ಗೂ ಒಂದೇ ಸಂಬ್ಳವೆ?"



"ಒಂತರಾ ಅಂಗೆ ಅನ್ಕೋ""ಓಲಿ ಆ ಕೆಲ್ಸ್ಗುಳ್ನ ಅಂಸವ್ವ ಮಾಡಕುಲ್ವೆ?""ಯಾ?""ಅದೇ ನಮ್ಮ್ ಮುದ್ದನ್ ಎಂಡ್ರೂ, ಅಂಸವ್ವಾಂತಲ್ವೆ ಅವ್ಳೆಸ್ರು?"



"ಓ...ಥೂ ಕುಲ್ಗೆಡ್ಸಿಕ್ತ್ಯ ಕಣ ನೀನು. ಅವ್ಳ್ ಉಟ್ಟೆಸ್ರು ಲಕ್ಸ್ಮಿ ಕಣ್ಲ. ಪಾಪ ಅವ್ರಪ್ಪ ಅಮ್ಮ ಕಷ್ಟ್ಪಟ್ಟು ಕರಿಯಕ್ ಸಿಟಿ ಎಸ್ರು ಇರ್ಲೀಂತ 'ಅಂಸ' ಅಂತ ಮಡ್ಗಿದ್ರೆ ಅಂಸವ್ವ ಅಂದು ಅದ್ನ ಒಂದೇ ಏಟ್ಗೆ ನಿಮ್ಮ್ ಗುಳುವ್ನಳ್ಳಿ ಎಸ್ರು ಮಾಡಾಕ್ಬುಟ್ಟೆ, ಆ ಪಾರಿನ್ನೋರು ನಮ್ಮ್ ಮುದ್ದನ್ ಎಸುರ್‍ನ 'ಮಡ್' ಮಾಡ್ದಂಗೆ"



"ಯಾಕ್ ಆ ಪಾರಿನ್ನೋರ್ಗೆ ಮುದ್ದುಕಿಸ್ಣಾ ಅನ್ನಕ್ ಬಾಯಿ ತಿರ್ಗಕುಲ್ವೆ? ಮಡ್ ಅಂದ್ರೇನ?" ಎಂದು ಕೇಳಿದ ಬಚ್ಚಪ್ಪ.



"ಅವ್ರ್ ಬಾಸೇಲಿ ಮಡ್ ಅಂದ್ರೆ ಮಣ್ಣಂತೆ. ಅಂಸುನ್ ಎಸ್ರುನೂವೆ ಅವ್ರ್ ಆಪೀಸಲ್ಲಿ 'ಯಾಮ್ ಸಾ' ಅಂತ ಕರಿತರಂತೆ. ಅಂಗಂದ್ರೇನ್ಲ ಅಂತ ಮುದ್ದುನ್ ಕೇಳುದ್ರೆ ಅಂದಿ ಕುಯ್ಯೋ ಗರ್ಗಸ ಅಂದ್ನಪ್ಪ"



"ಎಲಾ ಇವ್ನ, ಮುದ್ದನ್ ಮಣ್ಣ್ ಮಾಡಿ ಅಂಸವ್ವುನ್ ಮಾಂಸ ಮಾಡಾಕವ್ರೆ ಅನ್ನು. ಅದ್ಸರೀ, ಇಬ್ರೂವೆ ಆಪೀಸ್ಗೊಂಟೋದ್ರೆ ಮನೆ ಕೆಲ್ಸ?"



"ಎಲ್ಲಾದ್ಕೂ ಮಿಸೀನ್ಗುಳವಂತೆ ಕಣ. ಬಟ್ಟೆ ಒಗ್ಯಕ್ಕೊಂದ್ ಮಿಸೀನು, ಕಸ ಗುಡ್ಸಕ್ಕೊಂದ್ ಮಿಸೀನು, ತಟ್ಟೆ ತೊಳ್ಯಕ್ಕೊಂದ್ ಮಿಸೀನು. ಆ ದೇಸ್ದಲ್ಲಿ ಅಸೀನಾಲು ಕರಿಯದೂ ಮಿಸೀನೇನಂತೆ"



"ನೀನೇಳದ್ ನೋಡುದ್ರೆ ಇತ್ಲುಕಡೆ ಕೆಲ್ಸುಕ್ಕು ಒಂದ್ ಇರ್ಬೌದೇನಪ್ಪ. ಅಂದಂಗೆ ಅದೇನೋ ಮಾದಿಗ್ರ ಮೆರ್ವಣಿಗೆ ಇಸ್ಯ ಮಾತಾಡ್ತಿದ್ದೆ ಪೋನಲ್ಲಿ?"

"ಥೂ ಮಾದಿಗ್ರಿಸ್ಯ ಅಲ್ಲ್ಕಣ್ಲೆ - ನೀನೀ ಜಾತಿ ಎಸ್ರಾಡದು ಬುಟ್ಟಾಕು, ಆ ಕಾಲ ಓಯ್ತು" ಎಂದು ಬಚ್ಚಪ್ಪನನ್ನು ಗದರಿಸಿದ ರಾಮಣ್ಣ,
"ಆ ದೇಸುದ್ ಇನ್ನೊಂದ್ ಇಸೇಸ ಏನ್ ಗೊತ್ತೇನ್ಲೇ? ಅಲ್ಲಿ ಎಂಗುಸ್ರುನ್ ಎಂಗುಸ್ರೇ ಗಂಡುಸ್ರುನ್ ಗಂಡುಸ್ರೇ ಕೂಡ್ಕ್ಯಂಡ್ ಮದ್ವ್ಯಾಗ್ಬೌದಂತೆ, ಸರ್ಕಾರ್ದೋರ್ ರಿಜಿಷ್ಟ್ರೂ ಮಾಡ್ತಾರಂತೆ. ಅಂತೋರೊಂದೀಟು ಜನ ವರ್ಸುಕ್ಕೊಂದ್ಸಲ ಪ್ಯಾಟೆ ರಸ್ತೆಗುಳಲ್ಲಿ ಮೆರ್ವಣ್ಗೆ ಒಯ್ತರಂತೆ. ಅದ್ನ 'ಮಾರ್ಡಿ ಗ್ರಾ' ಅಂತರಂತೆ." ಎಂದ.

"ತಕ್ಕಳಪ್ಪ !" ಬಚ್ಚಪ್ಪ ಬೆರಗಾಗಿ ಕಣ್ಣು ಬಿಟ್ಟು ಕುಳಿತ "ಒಳ್ಳೆ ಐನಾತಿ ಸಿಶ್ಟಮ್ಮೇ ಮಡಿಕಂಡವ್ರೆ ಬುಡತ್ಲಗೆ"

"ಊಂ, ವಸಿ ಅಂಗೇಯ. ಅವ್ರ್ ಪಾರ್ಲ್‍ಮ್ಯಂಟ್ನಗಿರೋ ಒಬ್ಳು ಮೆಂಬ್ರೂನೂ ಮುಂಚೆ ಗಂಡ್ಸಾಗಿದ್ಲಂತೆ"

"ಅದ್ಯಾವ್ ದೊಡ್ಡಿಸ್ಯ ಬುಡು, ನಾವ್ ಡಕಾಯ್ತಿನೇ ಮಾಡ್ಕಣಿಲ್ವೆ? ಅಂದ್ರೂ ಬಲ್ನನ್ಮಗನ್ದ್ ದೇಸನೇ ಅದು ! ಒಂದ್ಕಿತ ನೋಡ್ಕಂಬರವ ನಡಿ ಮತ್ತಿಗ, ಮುದ್ದುನ್ಗೇಳಿ ತಿಗೀಟು ತರ್ಸ್ಕಂಡು" ಎಂದ ಬಚ್ಚಪ್ಪ ಹುರುಪಿನಿಂದ.

"ಲೈ, ನ್ಯಟ್ಗೆ ಬೆಂಗ್ಳೂರೇ ನೋಡಿಲ್ಲ ಒಂಟ್ಬುಟ್ಟ ಇವ್ನು ಸೀದ ಪಾರಿನ್ಗೆ. ಬೆಳಿಗ್ಗೆ ಬಿರ್ನೆದ್ದು ಪಷ್ಟ್ ಬಸ್‍ಗೇ ಊರ್ಗೋಂಟೋಯ್ತಿನಿ ಅಂತಿದ್ದೆ, ಮಲ್ಗೋ ಟೇಂ ಆಗಿಲ್ವ? ಬಿದ್ಗ ನಡಿ" ಎಂದು ಗದರುತ್ತಾ ಬಚ್ಚಪ್ಪನ ಹುರಿಪಿನ ಮೋಂಬತ್ತಿಯನ್ನು ನಿರ್ದಯವಾಗಿ ನಂದಿಸಿ ಒಳನಡೆದ ರಾಮಣ್ಣ.

ನನ್ನೆಂಡ್ತಿ ಅಂತಾಳೆ

ನನ್ನೆಂಡ್ತಿ ಅಂತಾಳೆ ನೀವೇನ್ರಿ ಯಾವಾಗ್ಲೂ ಕೇರ್‍ಲೆಸ್ಸು ಇಂಗೆ
ನಿಮ್ಮ್ ತಲೆಕೂದ್ಲು ದಿನದಿನಕ್ ಇಂಗ್ ಬೆಳ್ಳಗಾಗ್ತಾ ಓದ್ರೆ ಎಂಗೆ
ಎಲ್ಲಾರೂ ಡೈ ಮಾಡ್ಕಂಡ್ ಎಂಗ್ ಗಮ್ಮಂತಿರ್ತರೆ ನೋಡಿ
ನೀವೂನು ಅಂಗ್ ಮಾಡ್ಕಂಡ್ ಸೊಲ್ಪ್ ಸ್ಮಾರ್ಟಾಗಿರಕ್ಕೇನ್ ದಾಡಿ

ನಾನಂತಿನಿ, ಅಲ್ವೇ ತಲೆ ಮ್ಯಾಲಿರೋದು ಎಂಗಿದ್ರೇನಂತೆ
ತಲೆ ಒಳ್ಗಿರದು ಕೆಟ್ಟೋದ್ ಕಾಲಕ್ಕೆ ಅಚ್ಚ್ಗಳವ ಬುಡು ಚಿಂತೆ
ಡೈ ಮಾಡ್ಕಂಡ್ ಶೆಂಟ್ ಆಕ್ಕಂಡ್ ಸೂಟ್ ಏರುಸ್ದೆ ಅಂತ್ ಇಟ್ಗಳನ
ನನ್ನ ನಿನ್ನ್ ಜೊತೆ ನೋಡ್ದೋರು "ಮಗನಾ?" ಅಂದ್ರೆ ಎಂಗ್ ತಡ್ಕಳನ

ರೀ, ಎಲ್ಲಾರೂ ಜಾಗ್ ಮಾಡಿ ಎಂಗ್ ಫಿಟ್‌ಆಗವ್ರೆ ನೋಡಿದೀರಾ
ಜನುಮ್ದಲ್ ನೀವ್ ಯಾವತ್ತಾದ್ರೂ ಒಂದೈವತ್ತು ಮೀಟ್ರು ಓಡಿದೀರಾ
ಅವ್ರ್ ಶೇವ್ ಮಾಡ್ಕಂಡ್ ಕ್ರೀಮ್ ಅಚ್ಗಂಡ್ ಎಂಗ್ ಮಿಂಚ್ತರೆ ನೋಡಿ
ನೀವೂ ಇದ್ದೀರ, ಅಬ್ಬಾ... ನಿಮ್ಮ್ ಬಣ್ಣ, ನಿಮ್ಮ್ ಒಟ್ಟೆ, ನಿಮ್ಮ್ ದಾಡಿ

ಲೇ, ಬುಲೆಟ್ ಮೇಲೆ ನಿಮ್ಮನೆಗ್ ಬಂದಾಗ್ ನನ್ನ್ ಕಪಿಲ್‌ದೇವ್ ಅಂತಿದ್ದೆ
ಈ ದೇಸಕ್ ಬಂದ್ ಎಲ್ಡೇ ದಿನಕ್ಕೆ ಇಂಗ್ ಉಲ್ಟಾ ತಿರುಗ್‌ಬಿದ್ದೆ
ನಿನ್ನ್ ಒಟ್ಟೆ ಬಟ್ಟೆ ತಂಟೆಗ್ ನಾನ್ ಯಾವತ್ತಾದ್ರೂ ಬತ್ತೀನಾ
ಸೀರೆ ಉಟ್ಗಳೆ ಅಂದ್ರೆ ಪ್ಯಾಂಟ್ ಮೆತ್ತ್ಗಂತ್ಯ ನಾನೇನ್ ಜಗಳ ಕಿತ್ತೀನಾ

ರೀ, ಇವಗ್ ಎಲ್ಲಾರ್ ಮನೇಲೂ ಅಡ್ಗೆ ಮಾಡದು ಗಂಡಸ್ರೇನಂತೆ
ಎಂಗುಸ್ರು ಏನಿದ್ರೂ ಜಿಮ್ಮು, ಶಾಪಿಂಗು, ಆರ್ಟ್ ಆಫ್ ಲಿವಿಂಗು ಅಂತೆ
ಮುಗ್ಸಿ ಮನ್ಗೋಗೋವೊತ್ಗೆ ಗಂಡ "ಕಾಪಿ ಬೇಕ ಡಾರ್ಲಿಂಗು?" ಅಂತಾರಂತೆ
ಮನೇಲ್ ಕಸಾನೂ ವಡುದು ಬಟ್ಟೇನೂ ವಗ್ದು ಮುಸ್ರೇನೂ ತಿಕ್ಕಿರ್ತಾರಂತೆ

ಔದ್ಕಣೆ, ಮಧ್ಯ ಬಿಡುವಾದ್ರೆ ಸ್ಯಾಟಿಲೈಟ್ ಡಿಜೈನೂ ಮಾಡಿರ್ತಾರಂತೆ
ಮಕ್ಕಳ್ನ ಹಡ್ದು ರಾವಣ್ರುನ್ ಬಡ್ದು ಸೀತೇರ್ನ ಕಾಪಾಡಿರ್ತಾರಂತೆ
ಇನ್ನ್ ಎಲ್ಲಾ ನಾವೇ ಮಾಡೋವಾಗ ಈ ಎಂಗುಸ್ರು ಯಾಕ್ಬೇಕು ಅಂತಾರಂತೆ
ಗಂಡಸ್ರು ಗಂಡಸ್ರೇ ಮದ್ವೆಯಾಕ್ಕಂಡು ಧಿಮ್‌ರಂಗ ಅಂತ್ ಇರ್ತಾರಂತೆ

ರೀ, ಅವೆಲ್ಲ ಬೇಕಾಗಿಲ್ಲ ಇನ್ನ್ಮೇಲೆ ನಿಮ್ಗೂ ಊಟ ತಿಂಡಿ ಎಲ್ಲ ಸ್ಟಿಕ್ಟು
ಬೆಳಿಗ್ಗೆ ನಾಷ್ಟಕ್ ಒಂದಿಷ್ಟ್ ಸೊಪ್ಪು ಸೊದೆ, ರಾತ್ರಿ ಊಟಕ್ ರಾಗಿ ಇಟ್ಟು
ನಿಮ್ಮ್ ಒಟ್ಟೆ ಇಳ್ಸೊವರ್ಗೂನೂವೆ ದಿನಾ ಸಾಯಂಕಾಲ ವಾಕಿಂಗು
ಚಕ್ಲಿ ನಿಪ್ಪಟ್ ಎಲ್ಲಾ ಕಟ್ಟು, ವೀಕ್‌ಎಂಡ್‌ಅಲ್ಲೂ ನೊ ಡ್ರಿಂಕಿಂಗು

ನಾ ಮೆಲ್ಲಗ್ ಅಂದೆ, ಲೇ ನಿಮ್ಮೂರ್ನಲ್ಲ್ ನಿನಗ್ ಗೊತ್ತಿದ್ದಂಗೆ
ನೀವ್ ಗೂಳಿನ ಯಳ್ಕಂಡ್ ಹಿತ್ತ್ಲಲ್ಲಿ ಕಟ್ಟಾಕಿ ಅಟ್ಟೀಗ್ ಬತ್ತಿದ್ದಂಗೆ
ಅದು ಮೆದೆಯಿಂದ್ ಕಿತ್ತಾಕಿದ್ ಒಣುಲ್ಲ್ನೆ ಮೇಯ್ಕಂಡ್ ಇರ್ತಾಇತ್ತೋ
ಪಕ್ಕದೋರ್ ತ್ವಾಟುದ್ ಟಮಾಟ ಗಿಡಕ್ ಬಾಯಾಕಿ ಬತ್ತಾಯಿತ್ತೊ

ಅಂಗಂದಾಗಿಂದ ಯಾಕೊ ನನ್ನೆಡ್ತಿ ನನ್ನ ಬಲೆ ನೆಚ್ಚ್ಗಂತಳೆ
ಮಕ ಕಪ್ಪ್ಗಿದ್ರು, ಒಟ್ಟೆ ದಪ್ಪ್ಗಿದ್ರು ನೀನೇ ಮಾರ ಅಂತ್ ಮೆಚ್ಚ್ಗಂತಳೆ
ಮೊನ್ನೆ ಸಾಯಂಕಾಲ ನಾನಂದೆ "ಲೆ ನಾನ್ ಒಂದ್ ವಾಕ್ ಓಗ್‌ಬತ್ತೀನಿ"
ಇವ್ಳಂತಾಳೆ "ಸುಮ್ಕ್ ಬೀರ್ ಇಡ್ಕಂಡ್ ಕುಂತ್ಗಳ್ರಿ, ಪಕೋಡ ಮಾಡ್ಕೊಡ್ತಿನಿ

ನಾನು ಅವಳು ಮತ್ತು ನಮ್ಮ ಬುಲೆಟ್ಟುಬೈಕು

ಎಮ್ ಜಿ ರೋಡಲ್ಲ್ ಗಜಗಂಭೀರ್ವಾಗ್ ಗುಡುಗ್ತಾ ಇದ್ರೆ ಇಂದ್ರನ್ ಐರಾವತದ್ ಗತ್ತು
ಶಿರಾಡಿಘಾಟ್ ಕಣಿವೆಗೆ ತೂರಾಡ್ಕಂಡ್ ಇಳಿಯೋವಾಗ ಕುಡಿದ ಹಾವಿಗೇರ್ದಂಗೆ ಮತ್ತು

ನೋಡಕ್ ಬ್ಲ್ಯಾಕ್ ಮ್ಯಾಜಿಕ್ಕು ಶಬ್ದ ಜಾಜ್ ಮ್ಯೂಜಿಕ್ಕು ಸ್ಪೀಡಲ್ಲಿ ಶೆವರ್ಲೆ ಕಾರ್ವೆಟ್ಟು
ಎಲ್ಲಾರ್ನೂ ಹಿಂದಾಕಿ ಅಡ್ಡಬಂದೋರ್ನ್ ತಿಂದಾಕಿ ಮುಂದೆ ಇರ್ತಾಇತ್ತು ನನ್ನ್ ಬುಲೆಟ್ಟು

ದಾರೀಲಿ ಸಿಗ್ತಿದ್ ರಾಜ್‌ದೂತ್ ಯೆಜ್ಡಿಗಳ್ನ ಬಾಳೆದಿಂಡ್ ಸಿಗ್ದಂಗೆ ಸಿಗುದ್ ಬಿಸಾಕ್ತಿತ್ತು
ನೂರ್‌ಸಿಸಿ ಬೈಕು ಸ್ಕೂಟ್ರುಗುಳ್ನಂತೂ ಚೂಯಿಂಗ್ ಗಮ್ ಅಗ್ದಂಗೆ ಅಗ್ದ್ ಉಗ್ದಾಕ್ತಿತ್ತು

ಇನ್ನ್ ಚಿಲ್ಲ್ರೇ ಪಲ್ಲ್ರೇ ಸುವೇಗ ಲೂನಾಗ್ಳು ಸದ್ದಿಗೇ ಬೆಚ್ಚಿಬಿದ್ದಂಗೆ ಮೋರಿಗ್ ಹಾರಿ
ಮೋಸಸ್‌ಗೆ ಕೆಂಪ್‌ಸಮುದ್ರ ಸೀಳ್ಕಂಡ್ ಬುಟ್ಟಂಗೆ ಬುಡೋವು ನನ್ನ್ ಬುಲೆಟ್ಟಿಗ್ ದಾರಿ

ಸನ್‌ಗ್ಲಾಸ್ ಆಕ್ಕಂಡ್ ಮೀಸೆ ನೀವ್ಗಂಡ್ ಓಗ್ತಾ ಇದ್ರೆ ಪೋಲಿಸ್ನೋನ್ ಸಲ್ಯೂಟ್ ಒಡೀತಿದ್ದ
ಸ್ಕೂಟ್ರಲ್ಲಿದ್ ಪಿಲಿಯನ್ ತಿರ್‌ತಿರ್‌ಗಿ ನೋಡ್ತಿದ್ರೆ ಮುಂದ್ ಡ್ರೈವರ್ ಹಲ್ಲ್‌ಹಲ್ಲ್ ಕಡೀತಿದ್ದ

ಹಾರನ್ ಒಡುದ್ರೆ ಬೀದೀಲ್ ಮಲ್ಗಿರೋ ನಾಯ್ಗೊಳ್ ಥಟ್ಟ್‌ನೆದ್ದ್‌ನಿಂತ್ಕಂಡ್ ಬೆದರೋವು
ಆಕ್ಸ್ಲೇಟ್ರು ತಿರುಗ್ಸುದ್ರೆ ಶೆಟ್ರಂಗ್ಡಿ ಶೋಕೇಸಲ್ಲ್ ಸಾಮ್ರಾಣಿ ಪಾಕೆಟ್ ಕೆಳ್ಗ್ ಉದುರೋವು

ದಿಲ್ಲಿಯಿಂದ ಕನ್ಯಾಕುಮಾರಿವರ್ಗೂ ದಿಲ್‌ದಾರಾಗ್ ತಿರ್ಗಾಡ್ಕಂಡ್ ಬಂದಿತ್ತ್ ಆ ಗಾಡಿ
ಕಾರು ಬಂದು ಗುದ್ದುದ್ರೂ ಕ್ಯಾರೇ ಅಂತಿರ್ಲಿಲ್ಲ ಅದು ಲಾರೀನೇ ಜಜ್ಜೋಂತ ಬಾಡಿ

ಮೇಟ್ಟುಪಾಳ್ಯ ಮೆಟ್ಟಿತ್ತು ನೈನಿತಾಲ್‌ಗೂ ಮುಟ್ಟಿತ್ತು ಕೋವಲಮ್ ಬೀಚಲ್ಲ್ ಕಣ್ಣಾಡ್ಸಿತ್ತು
ಊಟೀಲಿ ಫ್ರೀಜಾಗಿ ಘಜಿಯಾಬಾದಲ್ಲ್ ಸೀಜಾಗಿ ಕೆಮ್ಮಣ್ಣ್‌ಗುಂಡಿ ಮಣ್ಣಲ್ ಒಣ್ಣಾಡ್ಸಿತ್ತು

ಭಾನ್ವಾರ ಬೆಳಿಗ್ಗೆ ಎದ್ದು ನನಗಿರ್ತಿತ್ತೋ ಇಲ್ಲ್ವೋ ಅದಕ್ಕಂತೂ ಗ್ಯಾರೆಂಟಿ ಎಣ್ಣೆ, ಸ್ನಾನ
ಪಾಯಿಂಟ್ ಸೆಟ್ ಮಾಡಿ ಕ್ಲಚ್ಚ್ ಅಡ್ಜಸ್ಟ್ ಮಾಡಿ ಕಾರ್ಬ್ರೇಟ್ರ್ಗ್ ಕೈ ಹಾಕೋತ್ಗ್ ಮಧ್ಯಾನ

ನೀರ್ ತರ್ಸಿ ಮೈ ತೊಳ್ದು ಗ್ರೀಸ್ ಹಚ್ಚಿ ಪಾಲಿಶ್ ಬಳ್ದು ಟೆಸ್ಟ್ ಡ್ರೈವ್‌ಗ್ ಓಗೋವತ್ಗೆ
ಬಿಸ್ಲಲ್ ಬೆಂದ್ ಮಸ್ತಾಗಿ ಊಟಕ್ ಕಾದ್ ಸುಸ್ತಾಗಿ ಕೊಚ್ಚಕ್ಕ್ ಬರೋಳ್ ಇವ್ಳ್ ನನ್ನ್ ಕುತ್ಗೆ

"ಈ ಬೈಕಿದ್ಯಲ್ಲಾ...ನನ್ನ್ ಸವ್ತಿ ಇದ್ದಂಗೆ, ಯಾವಾಗ್ ನೋಡುದ್ರೂ ಮೆತ್ತ್ಗಂಡಿರ್ತ್ಯ ಇದ್ನ"
"ಅಂಗ್ಯಾಕಂತಿ ಬಾ ನಿಂಗೂ ಗ್ರೀಸ್ ಅಚ್ತಿನಿ, ನೀನಿಂಗಿದ್ದಿದ್ರೆ ನಿನ್ನ್ ಒಂದ್ಗಳಿಗೆ ಬುಟ್ಟಿರ್ತಿದ್ನ?"

"ಮತ್ತ್ ನನ್ನ್ ಯಾಕ್ ಕಟ್ಗಂಡೆ ಇದ್ನೆ ಮದ್ವ್ಯಾಗ್ಬೇಕಿತ್ತು, ಇಬ್ಬುರ್ಗೂ ವರ್ಸೆ ಸರೋಗಿರದು"
"ಅವಗ್ ಏಳ್ದಂಗ್ ಎಲ್ಲ್ ಕೇಳದೇ, ನಿನ್ನಂಗ್ ಮಾತ್‌ಮಾತ್ಗೂ ರಿವರ್ಸ್ ಗೇರ್‍ಗೋಗಿರದು"

ಮದ್ವೆಯಾದೊಸ್ತ್ರಲ್ಲಿ ನಾವಿಬ್ರೂ ಆ ಬೈಕಲ್ಲಿ ಫ್ರೆಂಡ್ ಮದ್ವೆಗೇಂತ ಕುಂದಾಪುರಕ್ ಓಗಿದ್ದ್ವಿ
ಮಲ್ನಾಡ ಸೊಬಗ್ ನೋಡ್ತ ತಂಗಾಳಿಗ್ ಮುಖ ನೀಡ್ತ ತೆಂಗು ಅಡ್ಕೆ ಜೊತೆ ತೂಗಿ ಬೀಗಿದ್ದ್ವಿ

ಬೆಟ್ಟದ್ರಸ್ತೇಲಿ ನೆಲಮುಟ್ಟಂಗ್ ಬೈಕ್ ವಾಲ್ಸುದ್ರೆ ಸಿಟ್ಟಲ್ಲ್ ನನ್ನ್ ಬೆನ್ನ್ ಗುದ್ದಿ ಮುನ್ಸ್ಕಣೋಳು
ಉಟ್ದೂರ್‍ಬುಟ್ಟೀ ರಾಸ್ಕಿಲ್‍ಬೆಟ್ಟಕ್ಕ್ ಬಂದ್ಮೇಲೂ ನಮ್ ಬುಲೆಟ್ಟೂಂತ ಅವಗವಗ್ ನೆನ್ಸ್ಕಣೋಳು

ಈ ಊರಲ್ಲೂ ಓಂಡ ಯಮ ಸುಜ್ಕಿ ಪಜ್ಕಿ ಅಂತ ಎಪ್ಪತ್ತಾರ್ ತರ ಬೈಕ್‍ಗಳ್ ಓಡಾಡ್ತವೆ
ಚಿಟ್ಟೆಗ್ಳಂಗ್ ಬಣ್ ಬಣ್ಣುದ್ ರೆಕ್ಕೆಗ್ಳಿಕ್ಕಂಡು ಅರ್ಜೆಂಟಲ್ಲಿರೋ ಜೀರುಂಡೆಗ್ಳಂಗ್ ಒದ್ದಾಡ್ತವೆ

ಆ ಆರ್ಲಿ ಡೇವಿಡ್ಸನ್ ಬುಟ್ಟ್ರೆ ಇನ್ಯಾವ್ದುರ್ ಮಕದಗೂ ಕಾಣ್ಲಿಲ್ಲ ನಮ್ಮ್ ಬುಲೆಟ್ಟಿನ್ ಕಳೆ
ಮಿಕ್ಕವೆಲ್ಲ ಈಗಿನ್ ಐ-ವಾಂಟ್ ಉಡುಗ್ರ ಇದ್ಯೆ ಇದ್ದಂಗೆ, ಗುಡುಗು ಜಾಸ್ತಿ ಕಮ್ಮಿ ಮಳೆ

ಅದ್ಕೆ ಅನ್ನದು, ಜನುಮ್ದಲ್ ಒಂದ್ಸಲ ಆಗುಂಬೇಲ್ ಸೂರ್ಯ ಮುಳ್ಗದ್ ನೋಡ್ದಿದ್ದಂಗೆ
ತೋಪಲ್ ಕೋಗ್ಲೆ ಆಡದ್ ಕೇಳ್ದಿದ್ದಂಗೆ, ಅಟ್ಟೀಲ್ ಮಕ್ಕಳೊಂದಿಗೆ ಗಿರ್ಗಿಟ್ಲೆ ಆಡ್ದಿದ್ದಂಗೆ

ನಮ್ಮೂರಲ್ಲುಟ್ಟಿ ಜೋಗ ಬೇಲೂರು ಗೊಮ್ಮಟ ಇವ್ನೆಲ್ಲ ಕಣ್ಣಾರೆ ನೋಡ್ದೆ ಬುಟ್ಟಿದ್ದಂಗೆ
ಜನುಮ್ದಲ್ ಒಂದ್ಸಲ ಬುಲೆಟ್ಟಿನ್ ಮಜ ನೋಡ್‍ದಿದ್ರೆ ಮನ್ಸ ಉಟ್ಟೊ ಉಟ್ ದಿದ್ದಂಗೆ